ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ಶೀಘ್ರದಲ್ಲೇ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಇದ್ದು, ಸದ್ಯದಲ್ಲೇ ನೀರಿನ ದರ ಹೆಚ್ಚಳವಾಗಲಿದೆ.
ಈಗಾಗಲೇ ಡಿಸಿಎಂ ಡಿ.ಕೆ. ಶಿವಕುಮಾರ್, ನೀರಿನ ದರ ಎಷ್ಟು ಹೆಚ್ಚಳ ಮಾಡಬೇಕು ಅಂತ ದರ ನಿಗದಿ ಮಾಡಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ನೀರಿನ ದರ ಹೆಚ್ಚಳದ ಬಗ್ಗೆ ಸರ್ಕಾರಕ್ಕೆ ಜಲಮಂಡಳಿ ವರದಿ ಸಲ್ಲಿಸಿದೆ.
BWSSB ಮೂರು ಮಾದರಿಯಲ್ಲಿ ದರ ಪರಿಷ್ಕರಣೆ ಪಟ್ಟಿ ಸಲ್ಲಿಸಿದೆ. ಹೀಗಾಗಿ ಒಂದೆರಡು ದಿನಗಳಲ್ಲಿ ನೀರಿನ ಬೆಲೆ ಏರಿಕೆ ಅದೇಶ ಹೊರ ಬೀಳುವ ಸಾದ್ಯತೆ ಇದೆ. ಜಲಮಂಡಲಿ ಮೂಲಗಳ ಪ್ರಕಾರ ಮೂರು ಮಾದರಿಯಲ್ಲಿ ದರ ಪರಿಷ್ಕರಣೆ ಮಾಡಲಾಗುತ್ತದೆ. ವಸತಿ, ವಾಣಿಜ್ಯ ಹಾಗೂ ಇತರೆ ಮೂರು ಮಾದರಿಯಲ್ಲಿ ದರ ಪರಿಷ್ಕರಣೆ ಪಟ್ಟಿ ಸಲ್ಲಿಸಿದೆ.
ಬೇಸಿಗೆ ಅವಧಿಯಲ್ಲಿ ಸಿಲಿಕಾನ್ ಸಿಟಿ ಜನರಿಗೆ ಶುದ್ಧ ಕುಡಿಯುವ ನೀರಿ ಒದಗಿಸಲು ಸಹ ಯೋಜನೆ ರೂಪಿಸಲಾಗಿದೆ. ಅಲ್ಲದೇ, ಟ್ಯಾಂಕರ್ ಮಾಫಿಯಾಗೆ ಬ್ರೇಕ್ ಹಾಕಲು ಕಾವೇರಿ ಕನೆಕ್ಟ್ ಸೆಂಟರ್ ಓಪನ್ ಮಾಡಲಾಗುತ್ತಿದೆ. ಈ ಹಿಂದೆ ಟ್ಯಾಂಕರ್ ಮಾಲೀಕರು ಬೇಕಬಿಟ್ಟಿ ಹಣ ವಸೂಲಿ ಮಾಡುತ್ತಿದ್ದರು. ಹೀಗಾಗಿ ಜನರಿಗೆ ಕಡಿಮೆ ಬೆಲೆಯಲ್ಲಿ ಟ್ಯಾಂಕರ್ ನೀರು ಒದಗಿಸಲು ಕಾವೇರಿ ಸಂಪರ್ಕ ಕೇಂದ್ರ ಓಪನ್ ಮಾಡಲಾಗುತ್ತಿದೆ.
ನಗರದಲ್ಲಿ ಅತಿ ಹೆಚ್ಚು ನೀರಿನ ಅಭಾವ ಇರುವ 10 ಕಡೆ ಕಾವೇರಿ ಕನೆಕ್ಟ್ ಸೆಂಟರ್ ಓಪನ್ ಮಾಡಲಾಗುತ್ತಿದೆ. ನೀರಿನ ಸಮಸ್ಯೆ ಎದುರಾಗುವ ಪ್ರಮುಖ ಕಡೆ ತಾತ್ಕಾಲಿಕವಾಗಿ ನೀರಿನ ಘಟಕ ಸ್ಥಾಪನೆ ಮಾಡಲಾಗುತ್ತಿದೆ. ಆ ಘಟಕದಲ್ಲಿ ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ನೀರು ಪೂರೈಕೆ ಮಾಡಲಾಗುತ್ತದೆ. ಶುದ್ಧ ಕಾವೇರಿ ನೀರನ್ನೇ ಟ್ಯಾಂಕರ್ ಮೂಲಕ ಪೂರೈಕೆ ಮಾಡಲು ನಿರ್ಧರಿಸಲಾಗಿದೆ.
ಹೀಗಾಗಿ ಖಾಸಗಿ ಟ್ಯಾಂಕರ್ ಗಳಿಗೂ ಕಾವೇರಿ ಕನೆಕ್ಟ್ ಸೆಂಟರ್ ನಿಂದ ನೀರು ಸರಬರಾಜು ಮಾಡಲು ಜಲಮಂಡಳಿ ನಿರ್ಧರಿಸಿದೆ. ಕಾವೇರಿ ಕನೆಕ್ಟ್ ನೀರು ಪಡೆಯಬೇಕಾದರೆ ಜನರು ಟ್ಯಾಂಕರ್ ವ್ಯವಸ್ಥೆ ಮಾಡಿಕೊಳ್ಳಬೇಕು. ಟ್ಯಾಂಕರ್ ಬಾಡಿಗೆ ಮೊತ್ತವನ್ನು ಸಾರ್ವಜನಿಕರು ಪಾವತಿ ಮಾಡಬೇಕು. ಜಲಮಂಡಳಿ ನಿಗದಿ ಮಾಡಿರುವ ದರ ಪಾವತಿಸಿ ನೀರು ಪಡೆಯಬಹುದು.
ಜಲ ಮಂಡಳಿಯ ಈ ಯೋಜನೆಯಿಂದ ಬೆಂಗಳೂರಿನ 110 ಹಳ್ಳಿಗಳಿಗೆ ಅನುಕೂಲವಾಗಲಿದೆ. ಇತ್ತೀಚೆಗೆ ಟ್ಯಾಂಕರ್ ನೀರನ್ನೇ ಅವಲಂಬಿಸಿರುವ ಅಪಾರ್ಟ್‌ಮೆಂಟ್ ಗಳಲ್ಲಿ ಕಾವೇರಿ ಕನೆಕ್ಟ್ ಸೆಂಟರ್ ನೀರು ತುಂಬಾನೆ ಅನುಕೂಲವಾಗುತ್ತದೆ ಎನ್ನಲಾಗಿದೆ.