ವಾಷಿಂಗ್ಟನ್: ಕಳೆದ 15 ತಿಂಗಳ ಯುದ್ಧದಿಂದ ನಲುಗಿ ಹೋಗಿರುವ ಗಾಜಾ ಪಟ್ಟಿ ಇನ್ನು ಅಮೆರಿಕದ ಭಾಗವಾಗಲಿದೆಯೇ?
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಈ ಸುಳಿವನ್ನು ನೀಡಿದ್ದಾರೆ. ಹಮಾಸ್ ಉಗ್ರರ ಹಿಡಿತದಲ್ಲಿರುವ ಯುದ್ಧಪೀಡಿತ ಗಾಜಾಪಟ್ಟಿಯನ್ನು ಅಮೆರಿಕ ತನ್ನ ವಶಕ್ಕೆ ಪಡೆಯಲಿದೆ ಎಂದು ಅವರು ಘೋಷಿಸಿದ್ದಾರೆ. ಟ್ರಂಪ್ ಈ ಹೇಳಿಕೆ ಮಧ್ಯ ಪ್ರಾಚ್ಯದ ರಾಜಕೀಯದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ.
ಬುಧವಾರ ಶ್ವೇತಭವನದಲ್ಲಿ ತಮ್ಮನ್ನು ಭೇಟಿಯಾದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಟ್ರಂಪ್ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಬಳಿಕ ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಯುದ್ಧದಿಂದ ನಾಶವಾಗಿರುವ ಗಾಜಾ ಪಟ್ಟಿಯನ್ನು ಅಮೆರಿಕ ತನ್ನ ವಶಕ್ಕೆ ಪಡೆದುಕೊಳ್ಳಲಿದೆ.
ಪ್ಯಾಲೆಸ್ತೀನಿಯರಿಗೆ ಅಲ್ಲಿ ಪುನರ್ವಸತಿ ಕಲ್ಪಿಸಲಾಗುವುದು. ಜೊತೆಗೆ ಗಾಜಾಪಟ್ಟಿಯನ್ನು ಅಭಿವೃದ್ಧಿಪಡಿಸಿ, ಪುನರ್ ನಿರ್ಮಾಣ ಮಾಡಲಾಗುವುದು. ಅಮೆರಿಕ ಆ ಪ್ರದೇಶದ ಮೇಲೆ ದೀರ್ಘಕಾಲದ ಮಾಲೀಕತ್ವ ಹೊಂದಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಇದನ್ನು ನೆತನ್ಯಾಹು, ಗಾಜಾದ ಭವಿಷ್ಯವನ್ನು ಮರುರೂಪಿಸಬಲ್ಲ ಐತಿಹಾಸಿಕ ತೀರ್ಮಾನ ಎಂದು ಬಣ್ಣಿಸಿದ್ದಾರೆ.
ನಾವು ಗಾಜಾವನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ಉಳಿದಿರುವ ಅಪಾಯಕಾರಿ ಬಾಂಬುಗಳು, ಶಸ್ತ್ರಾಸ್ತ್ರಗಳನ್ನು ತೆರವುಗೊಳಿಸುತ್ತೇವೆ. ಧ್ವಂಸಗೊಂಡ ಕಟ್ಟಡಗಳನ್ನು ತೆರವು ಮಾಡಿ ಆರ್ಥಿಕ ಚಟುವಟಿಕೆಗಳನ್ನು ಸೃಷ್ಟಿಸುತ್ತೇವೆ. ಹೊಸ ಹೊಸ ಕಟ್ಟಡಗಳನ್ನು ನಿರ್ಮಿಸುತ್ತೇವೆ. ಉದ್ಯೋಗ ಮತ್ತು ವಸತಿ ಅವಕಾಶಗಳನ್ನು ಕಲ್ಪಿಸುತ್ತೇವೆ ಎಂದು ಅವರು ಹೇಳಿದರು.
ಪ್ರದೇಶದಲ್ಲಿ ಸುರಕ್ಷತೆ ಖಾತ್ರಿಗೊಳಿಸಲು ಅಮೆರಿಕ ಸೇನೆಯನ್ನು ನಿಯೋಜಿಸುತ್ತೀರಾ ಎಂಬ ಪ್ರಶ್ನೆಗೆ, ಅಗತ್ಯವಾದರೆ ನಾವು ಅದನ್ನೂ ಮಾಡುತ್ತೇವೆ. ಇದು ಸಂಪೂರ್ಣ ಮಧ್ಯಪ್ರಾಚ್ಯಕ್ಕೆ ಹೆಮ್ಮೆಯ ವಿಷಯ” ಎಂದು ಟ್ರಂಪ್ ಹೇಳಿದ್ದಾರೆ.
2023ರ ಅಕ್ಟೋಬರ್‌ನಿಂದಲೇ ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನಲ್ಲಿರುವ ಹಮಾಸ್ ಉಗ್ರರ ನಡುವೆ ಗಾಜಾದಲ್ಲಿ ಯುದ್ಧ ನಡೆಯುತ್ತಿದೆ. ಇತ್ತೀಚೆಗಷ್ಟೇ ನಡೆದ ಒಪ್ಪಂದದಿಂದಾಗಿ ಯುದ್ಧ ವಿರಾಮ ಘೋಷಣೆಯಾಗಿದೆ. ಎರಡೂ ಕಡೆಯವರು ತಮ್ಮ ಒತ್ತೆಯಲ್ಲಿರುವವರ ಬಿಡುಗಡೆ ಪ್ರಕ್ರಿಯೆ ಆರಂಭಿಸಿದ್ದಾರೆ.
ಇಸ್ರೇಲ್ ನಡೆಸಿದ ವೈಮಾನಿಕ ಹಾಗೂ ಭೂದಾಳಿಯಿಂದ ಗಾಜಾ ಸಂಪೂರ್ಣ ನಿರ್ನಾಮವಾಗಿದೆ. ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯಾ ಸಾಂದ್ರತೆ ಹೊಂದಿರುವ ಈ ಪ್ರದೇಶದಲ್ಲಿ ಸುಮಾರು 21 ಲಕ್ಷ ಜನರು ವಾಸಿಸುತ್ತಿದ್ದರು. ಯುದ್ಧದಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.