ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣಗಳ ನಡುವಿನ ಗುದ್ದಾಟ ಈಗ ದೆಹಲಿ ಅಂಗಳ ತಲುಪಿದೆ. ಯತ್ನಾಳ್ ಬಣದ ನಾಯಕರು ಎರಡು-ಮೂರು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ರಾಜ್ಯದ ಬಿಕ್ಕಟ್ಟು ರಾಷ್ಟ್ರೀಯ ಬಿಕ್ಕಟ್ಟಾಗಿ ಪರಿಣಮಿಸಿದೆ. ಹಾಗಾಗಿ, ಜೆ.ಪಿ.ನಡ್ಡಾ ಹಾಗೂ ಅಮಿತ್ ಶಾ ಅವರ ತೀರ್ಮಾನವೇ ಅಂತಿಮವಾಗಿದ್ದು, ಇವರ ನಡೆ ಏನು ಎಂಬ ನಿರೀಕ್ಷೆ ಹೆಚ್ಚಾಗಿದೆ.
ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಚೆನ್ನಾಗಿಲ್ಲ ಎಂಬುದು ಬಹಿರಂಗ ಸತ್ಯವಾಗಿದೆ. ಹಾಗಂತ, ಬಿ.ವೈ.ವಿಜಯೇಂದ್ರ ಅವರನ್ನು ದಿಢೀರನೆ ಅಧಿಕಾರದಿಂದ ಕೆಳಗಿಳಿಸುವುದು ಅಷ್ಟು ಸುಲಭವೂ ಅಲ್ಲ. ಅದರಲ್ಲೂ, ಬಿ.ಎಸ್.ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿದ್ದು, ಹೆಚ್ಚಿನ ಮತಗಳನ್ನು ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ.
ಬಿಎಸ್ ವೈ ಸುಮ್ಮನಿರುವ ನಾಯಕ ಅಲ್ಲ
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ನಾಯಕತ್ವದಲ್ಲಿ ಕರ್ನಾಟಕದಲ್ಲಿ ಬಿಜೆಪಿಯೇನೂ ಕಳಪೆ ಪ್ರದರ್ಶನ ನೀಡಿಲ್ಲ. ಮೂರು ವಿಧಾನಸಭೆ ಕ್ಷೇತ್ರಗಳ ಸೋಲು ಹೊರತುಪಡಿಸಿ ಬಿಜೆಪಿಗೆ ಚುನಾವಣೆ ಲೆಕ್ಕಾಚಾರದಲ್ಲಿ ಅಂತಹ ಹಿನ್ನಡೆಯೇನೂ ಆಗಿಲ್ಲ. ಹಾಗಾಗಿ, ಕೆಲ ನಾಯಕರ ಬಂಡಾಯಕ್ಕೆ ಮಣಿದು ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗುವುದು ಎಂದರೆ ಬಿಎಸ್ ವೈ ಅವರು ಸುಮ್ಮನೆ ಕೂರುವ ವ್ಯಕ್ತಿಯಂತೂ ಅಲ್ಲ. ಇದು ಅಮಿತ್ ಶಾ ಅವರಿಗೂ ಗೊತ್ತಿದೆ. ಹಾಗಾಗಿಯೇ, ಅಮಿತ್ ಶಾ ಅವರು ಬಿಎಸ್ ವೈ ಅವರಿಗೆ ಕರೆ ಮಾಡಿ, ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಂಡಾಯದ ಗತಿ ಏನು?
ಹಾಗಂತ, ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ ಅವರ ಬಂಡಾಯವೇನೂ ಕಡಿಮೆ ಪ್ರಮಾಣದಲ್ಲಿ ಇಲ್ಲ. ಇವರ ಬಂಡಾಯದಿಂದ ಬಿಜೆಪಿಯ ನಾಯಕತ್ವ ಬಿಕ್ಕಟ್ಟು ದೇಶದ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹಾಗಾಗಿ, ಇವರನ್ನೂ ಅಮಿತ್ ಶಾ ಅವರು ಕಡೆಗಣಿಸುವಂತಿಲ್ಲ. ಆದರೆ, ತೀರ್ಮಾನ ಎಂಬ ವಿಷಯ ಬಂದರೆ ಅಮಿತ್ ಶಾ ಹಾಗೂ ನಡ್ಡಾ ಅವರು ಎಂತಹ ಕಠಿಣ ತೀರ್ಮಾನವನ್ನೂ ತೆಗೆದುಕೊಳ್ಳಬಲ್ಲರು. ಎಂತಹ ಬಂಡಾಯವನ್ನೂ ಶಮನ ಮಾಡಬಲ್ಲರು. ಆದರೆ, ರಾಜ್ಯ ಬಿಜೆಪಿಯ ಇಬ್ಬಣಗಳ ವಿಷಯದಲ್ಲಿ ನಡ್ಡಾ ಹಾಗೂ ಅಮಿತ್ ಶಾ ಯಾವ ತೀರ್ಮಾನ ತೆಗೆದುಕೊಳ್ಳಲಿದ್ದಾರೆ? ರಾಜ್ಯ ಬಿಜೆಪಿಯಲ್ಲಿ ಮುಂದೇನಾಗಲಿದೆ ಎಂಬುದಕ್ಕೆ ಕಾಲವೇ ತೀರ್ಮಾನ ಮಾಡಲಿದೆ.