ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ಆಟಗಾರ, ತಂಡದ ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್(Rahul Dravid) ಅವರು ನಟಿಸಿದ್ದ ಜಾಹೀರಾತೊಂದು(advertisement) ಜನಪ್ರಿಯವಾಗಿತ್ತು. ಟ್ರಾಫಿಕ್ನಲ್ಲಿ ಸಿಲುಕಿದ್ದ ದ್ರಾವಿಡ್ ಸಿಟ್ಟಿಗೆದ್ದು ಬೇರೆ ವಾಹನಗಳ ಚಾಲಕರ ಜತೆ ಜಗಳವಾಡಿ ʼಇಂದಿರಾನಗರದ ಗೂಂಡಾʼ ನಾನು ಎಂದು ಹೇಳಿದ್ದು ಹೆಚ್ಚು ಗಮ ನ ಸೆಳೆದಿತ್ತು. ಅದೇ ರೀತಿ ಅವರು ತಮ್ಮ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆಸಿದ ಗೂಡ್ಸ್ ವಾಹನ ಚಾಲಕನ ಜತೆ ವಾಗ್ವಾದ ನಡೆಸಿದ ಘಟನೆ ನಡೆದಿದೆ. ಘಟನೆಯ ವಿಡಿಯೊ ವೈರಲ್ ಆಗಿದೆ.
ಅಫಘಾತದಲ್ಲಿ ದ್ರಾವಿಡ್ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಹಿಂದಿನಿಂದ ಕಾರಿಗೆ ಗೂಡ್ಸ್ ವಾಹನ ಟಚ್ ಆಗಿದ್ದು, ಈ ವೇಳೆ ದ್ರಾವಿಡ್ ಹಾಗೂ ಗೂಡ್ಸ್ ವಾಹನ ಚಾಲಕನ ನಡುವೆ ಸಣ್ಣ ವಾಗ್ವಾದ ನಡೆದಿದೆ.
ನಗರದ ಕನ್ನಿಂಗ್ ಹ್ಯಾಮ್(Cunningham) ರಸ್ತೆಯಲ್ಲಿ ಮಂಗಳವಾರ ಫೆಬ್ರವರಿ 4 ಸಂಜೆ ಘಟನೆ ನಡೆದಿದೆ. ಕಾರಿಗೆ ಗೂಡ್ಸ್ ವಾಹನ ಟಚ್ ಆದ ಬಳಿಕ ರಾಹುಲ್ ದ್ರಾವಿಡ್ ಕಾರಿನಿಂದ ಕೆಳಗಿಳಿದು ಕಾರನ್ನು ಪರಿಶೀಲಿಸಿದ್ದಾರೆ. ಈ ವೇಳೆ ರಾಹುಲ್ ದ್ರಾವಿಡ್ ಹಾಗೂ ಗೂಡ್ಸ್ ಆಟೋ ಚಾಲಕನ ನಡುವೆ ಸಣ್ಣ ವಾಗ್ವಾದ ನಡೆದಿದೆ. ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸದ್ಯ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.
ದ್ರಾವಿಡ್ ಅವರು ಇಂಡಿಯನ್ ಎಕ್ಸ್ಪ್ರೆಸ್ ಸಿಗ್ನಲ್ ಕಡೆಯಿಂದ ಹೈಗ್ರೌಂಡ್ಸ್ ಕಡೆಗೆ ಹೊರಟಿದ್ದರು. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಟ್ರಾಫಿಕ್ ಉಂಟಾಗಿತ್ತು. ಈ ವೇಳೆ ಟ್ರಾಫಿಕ್ನಲ್ಲಿ ದ್ರಾವಿಡ್ ಕಾರು ನಿಲ್ಲಿಸಿದ್ದರು. ಕಾರಿಗೆ ಹಿಂದಿನಿಂದ ಬಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.