ವಿಜಯಪುರ: ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಸುಕುಧಾರಿ ಖದೀಮರ ಬಗ್ಗೆ ಆತಂಕ ಮನೆ ಮಾಡುತ್ತಿದೆ. ಈಗ ಮುಸುಕುಧಾರಿ ಖದೀಮರ ಗ್ಯಾಂಗ್ ವೊಂದು ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯಲ್ಲಿ (Vijayapura) ನಡೆದಿದೆ. ಜೈನಾಪುರ ಲೇಔಟ್ ನ ನಿವಾಸಿ ಸಂತೋಷ್ ಕನ್ನಾಳ ಸಾವನ್ನಪ್ಪಿರುವ ವ್ಯಕ್ತಿ ಎನ್ನಲಾಗಿದೆ. ಜ.16 ರಂದು ಸಂತೋಷ್ ಮನೆಗೆ ದರೋಡೆಕೋರರು ನುಗ್ಗಿದ್ದಾರೆ. ಈ ವೇಳೆ ಸಂತೋಷ್ ಅವರನ್ನು ಹೆದರಿಸಿ ಹೊರಗೆ ಹಾಕಲು ಮುಂದಾಗಿದ್ದಾರೆ. ಈ ವೇಳೆ ಖದೀಮರು ಚಾಕುವಿನಿಂದ ಅವರ ಎದೆ ಹಾಗೂ ಬೆನ್ನಿಗೆ ಇರಿದು ನಂತರ ಮೊದಲನೇ ಮಹಡಿ ಮೇಲಿನಿಂದ ಕೆಳಗೆ ಎಸೆದಿದ್ದಾರೆ. ಅಲ್ಲದೇ, ಅವರ ಪತ್ನಿ ಭಾಗ್ಯಜ್ಯೋತಿ ಅವರ ಕೊರಳಲಿದ್ದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಸಂತೋಷ್ ಅವರನ್ನು ಕೂಡಲೇ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿಸಿತ್ತು. ಆದರೆ, ಕಿಡ್ನಿಗೆ ಸೊಂಕು ತಗುಲಿದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ. ಘಟನೆಯಿಂದಾಗಿ ಕುಟುಂಬಸ್ಥರು ಸಂತೋಷ್ ಅವರನ್ನು ಉಳಿಸಿಕೊಳ್ಳಲು ಬೆಂಗಳೂರಿನ ಆಸ್ಪತ್ರೆಗೂ ದಾಖಲಿಸಿದ್ದರು. ಸುಮಾರು 20 ಲಕ್ಷ ರೂ. ಖರ್ಚು ಮಾಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.