ಹುಬ್ಬಳ್ಳಿ: ಬಾಲಕನಿಗಾದ ಗಾಯಕ್ಕೆ ಸ್ಟಿಚ್ ಹಾಕುವ ಬದಲು ಫೆವಿಕ್ವಿಕ್ ಹಾಕಿರುವ ಘಟನೆ ನಡೆದಿದೆ.
ಈ ಘಟನೆ ಜ. 14ರಂದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಈಗ ತಡವಾಗಿ ಬೆಳಕಿಗೆ ಬಂದಿದೆ. ಗುರುಕಿಶನ್ ಅಣ್ಣಪ್ಪ ಹೊಸಮನಿ( 7 ವರ್ಷ) ಎಂಬ ಬಾಲಕ ಆಡುತ್ತಿದ್ದ ವೇಳೆ ಗಾಯಗೊಂಡಿದ್ದ. ಹೀಗಾಗಿ ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.
ಮೂರು ಸ್ಟಿಚ್ ಹಾಕುವಷ್ಟು ಆದ ಗಾಯಕ್ಕೆ ನರ್ಸ್ ಒಬ್ಬಳು ಫೆವಿಕ್ವಿಕ್ ಹಾಕಿ ಚಿಕಿತ್ಸೆ ನೀಡಿದ್ದಾಳೆ. ನರ್ಸ್ ಜ್ಯೋತಿ ಎಂಬಾಕೆ ಗಾಯಕ್ಕೆ ಹೊಲಿಗೆ ಹಾಕುವುದನ್ನು ಬಿಟ್ಟು ಫೆವಿಕ್ವಿಕ್ ಗಮ್ ಅಂಟಿಸಿ ಚಿಕಿತ್ಸೆ ನೀಡಿದ್ದಾಳೆ.
ಇದನ್ನು ಪ್ರಶ್ನಿಸಿದ್ದಕ್ಕೆ ಸ್ಟಿಚ್ ಹಾಕಿದರೆ ಬಾಲಕನ ಕೆನ್ನೆ ಮೇಲೆ ಕಲೆ ಆಗುತ್ತಿತ್ತು. ಹೀಗಾಗಿ ಚರ್ಮದ ಮೇಲೆ ಮಾತ್ರ ಫೆವಿಕ್ವಿಕ್ ಹಾಕಿ ಚಿಕಿತ್ಸೆ ನೀಡಿದ್ದೇನೆ ಎಂದು ಉಡಾಫೆಯ ಉತ್ತರ ನೀಡಿದ್ದಾಳೆ.
ನೀವು ಫೆವಿಕ್ವಿಕ್ ಹಚ್ಚಬೇಡಿ ನಾವು ಮುಂದೆ ಹೋಗುತ್ತೇವೆ ಅಂದಿದ್ದರೆ ರೆಫರ್ ಮಾಡುತ್ತಿದ್ದೇವು. ನನಗೆ ತಿಳಿದ ಮಟ್ಟಿಗೆ ಚಿಕಿತ್ಸೆ ನೀಡಿದ್ದೇನೆ ಎಂದು ಹೇಳಿದ್ದಾಳೆ. ಈ ಕುರಿತು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿರುವ ಕುಟುಂಬಸ್ಥರು, ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ದೂರು ನೀಡಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿರುವ ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ಸುರಗಿಹಳ್ಳಿ ಕ್ರಮ ಕೈಗೊಳ್ಳುವುದಾಗಿ ಅಷ್ಟೇ ಹೇಳಿದ್ದಾರೆ. ಆದರೆ, ನರ್ಸ್ ಜ್ಯೋತಿಯನ್ನು ಇದುವರೆಗೂ ಯಾವ ಕಾರಣಕ್ಕೆ ಅಮಾನತು ಮಾಡಿಲ್ಲ ಎಂದು ಕುಟುಂಬಸ್ಥರು ಪ್ರಶ್ನಿಸಿ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.