ತಿರುವನಂತಪುರ: “ಅಂಗನವಾಡಿಯಲ್ಲಿ ನಮಗೆ ಉಪ್ಪಿಟ್ಟು ಕೊಡೋ ಬದಲು ಬಿರಿಯಾನಿ ಮಕ್ಕು ಚಿಕನ್ ಫ್ರೈ ಕೊಟ್ಟರೆ ಚೆನ್ನಾಗಿರುತ್ತಲ್ಲಮ್ಮಾ…”
ಕೇರಳದ ಅಂಗನವಾಡಿ ಬಾಲಕ ಶಂಕು ರಾಜ್ಯ ಸರ್ಕಾರಕ್ಕೆ ಇಂಥದ್ದೊಂದು ಮುದ್ದಾದ ಬೇಡಿಕೆಯಿಟ್ಟಿದ್ದಾನೆ. ಅವನ ಡಿಮ್ಯಾಂಡ್ ಅನ್ನು ಶಂಕುವಿನ ತಾಯಿ ವಿಡಿಯೋ ಮಾಡಿ ಇನ್ ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದ್ದು, ಕೇರಳ ಆರೋಗ್ಯ ಸಚಿವರ ಮೊಬೈಲಿಗೂ ತಲುಪಿದೆ.
ಈ ಮಗುವಿನ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಸರ್ಕಾರ, ಅಂಗನವಾಡಿ ಮಕ್ಕಳ ಆಹಾರದ ಮೆನುವಿನಲ್ಲಿ ಬದಲಾವಣೆ ತರಲು ನಿರ್ಧರಿಸಿದೆ. ಹೀಗೆಂದು ಸ್ವತಃ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ತಿಳಿಸಿದ್ದಾರೆ.
ಅಂಗನವಾಡಿಯಲ್ಲಿ ಓದುತ್ತಿರುವ ರಿಜುಲ್ ಎಸ್. ಸುಂದರ್(Rizul S. Sunder) ಪ್ರೀತಿಯಿಂದ ಎಲ್ಲರೂ ಶಂಕು ಎಂದು ಕರೆಯುತ್ತಾರೆ)ಗೆ ಇತ್ತೀಚೆಗೆ ಅವನ ಅಮ್ಮ ಮನೆಯಲ್ಲೇ ಮಾಡಿದ ಬಿರಿಯಾನಿಯನ್ನು ತಿನ್ನಿಸುತ್ತಿರುತ್ತಾರೆ. ಆಗ ತನ್ನ ಮನದ ಮಾತನ್ನು ಬಿಚ್ಚಿಡುವ ಶಂಕು, “ಅಮ್ಮಾ, ಅಂಗನವಾಡಿಯಲ್ಲಿ ನಮಗೆ ದಿನಾ ಉಪ್ಮಾ ಕೊಡ್ತಾರೆ. ಅದರ ಬದಲಿಗೆ ಅವರು ಬಿರಿಯಾನಿ ಮತ್ತು ಪೊರಿಚ್ಚ ಕೋಯಿ(ಚಿಕನ್ ಫ್ರೈ) ಕೊಡಬಹುದಲ್ವಾ” ಎಂದು ಮುಗ್ಧನಾಗಿ ಪ್ರಶ್ನಿಸುತ್ತಾನೆ.
ಅವನ ಈ ಮಾತುಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿದ ತಾಯಿ ಅದನ್ನು ತಮಾಷೆಗೆಂದು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಅದು ಕಾಡ್ಗಿಚ್ಚಿನಂತೆ ವೈರಲ್ ಆಗಿದೆ. ಕೊನೆಗೆ ಸಚಿವೆ ವೀಣಾ ಜಾರ್ಜ್ ಅವರನ್ನೂ ತಲುಪಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಸಚಿವೆ, “ಶಂಕುವಿನ ಕೋರಿಕೆಯನ್ನು ಪರಿಗಣಿಸಿ ನಾವು ಅಂಗನವಾಡಿ ಆಹಾರದ ಮೆನುವನ್ನು ಪರಿಷ್ಕರಿಸಲು ಚಿಂತನೆ ನಡೆಸಿದ್ದೇವೆ.
ಶಂಕು ಬಹಳ ಮುಗ್ಧನಾಗಿ ಇಂಥದ್ದೊಂದು ಬೇಡಿಕೆಯಿಟ್ಟಿದ್ದಾನೆ. ಮಕ್ಕಳಿಗೆ ಪೌಷ್ಟಿಕಾಂಶ ದೊರೆಯಲಿ ಎಂಬ ಕಾರಣಕ್ಕೆ ನಾವು ಬೇರೆ ಬೇರೆ ಬಗೆಯ ಆಹಾರಗಳನ್ನು ಒದಗಿಸುತ್ತಿದ್ದೇವೆ. ನಮ್ಮ ಸರ್ಕಾರದ ಅವಧಿಯಲ್ಲೇ ಮಕ್ಕಳಿಗೆ ಮೊಟ್ಟೆ ಮತ್ತು ಹಾಲು ಕೊಡುವ ಯೋಜನೆ ಜಾರಿ ಮಾಡಿದ್ದೇವೆ. ಈಗ ಶಂಕುವಿನ ಬೇಡಿಕೆಯನ್ನೂ ಪರಿಗಣಿಸುತ್ತೇವೆ” ಎಂದಿದ್ದಾರೆ.