ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಡಾಲರ್ ಎದುರು ಮತ್ತೆ ಕುಸಿತ ಕಂಡಿದೆ. ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯಕ್ಕೆ ಸೆಣಸಾಡಲು ಆಗುತ್ತಿಲ್ಲ. ಹೀಗಾಗಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಕುಸಿಯುತ್ತ ಸಾಗುತ್ತಿದೆ.
ಡಾಲರ್ ಎದುರು 80ರ ಆಸುಪಾಸಿನಲ್ಲಿದ್ದ ರೂಪಾಯಿ ಮೌಲ್ಯ ಆಗ 87 ರ ಗಡಿ ದಾಟಿದೆ. ಈಗ ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಡಾಲರ್ ಗೆ 87.1125 ರೂ. ಬೆಲೆ ಇದೆ.
ಅಂತಾರಾಷ್ಟ್ರೀಯ ಅನಿಶ್ಚಿತ ಪರಿಸ್ಥಿತಿ ಉಂಟಾಗುತ್ತಿರುವುದು, ಷೇರು ಮಾರುಕಟ್ಟೆಯಿಂದ ವಿದೇಶಿ ಹೂಡಿಕೆ ಹಿಂದೆ ಸರಿಯುತ್ತಿರುವುದು, ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ತೆರಿಗೆ ನೀತಿಯಿಂದಾಗಿ ರೂಪಾಯಿ ಮೌಲ್ಯ ಕುಸಿಯುವಂತಾಗುತ್ತಿದೆ.
ಇದಷ್ಟೇ ಅಲ್ಲದೇ, ದೇಶದ ನೂತನ ಗವರ್ನರ್, ರೂಪಾಯಿ ರಕ್ಷಣೆಗಿಂತ ಮಾರುಕಟ್ಟೆ ಪ್ರಭಾವಕ್ಕೆ ಅವಕಾಶ ನೀಡಿದ್ದು ಕೂಡ ರೂಪಾಯಿ ಮೌಲ್ಯ ಕುಸಿಯುವಂತಾಗುತ್ತಿದೆ ಎಂದು ಆರ್ಥಿಕ ತಜ್ಞರು ಉಹಿಸುತ್ತಿದ್ದಾರೆ.
ಕೆನಡಾ, ಮೆಕ್ಸಿಕೋ ಮತ್ತು ಚೀನಾ ದೇಶಗಳ ಸರಕುಗಳ ಮೇಲೆ ಆಮದು ಸುಂಕ ವಿಧಿಸುವುದಾಗಿ ಟ್ರಂಪ್ ಹೇಳಿದ್ದು ಕೂಡ ಮಾರುಕಟ್ಟೆ ಅಲ್ಲಾಡುವಂತೆ ಮಾಡುತ್ತಿದೆ. ಈಗ ಚೀನಾವು ಅಮೆರಿಕದ ಸರಕುಗಳಿಗೆ ತೆರಿಗೆ ಹಾಕುವುದಾಗಿ ಹೇಳಿದೆ. ಇದರ ಬೆನ್ನಲ್ಲೇ ಇವತ್ತು ಟ್ರೇಡಿಂಗ್ನಲ್ಲಿ ರೂಪಾಯಿ ಮೌಲ್ಯ ಮತ್ತೆ ಕುಸಿತ ಕಾಣುವಂತಾಯಿತು. ಮಾರುಕಟ್ಟೆಯಲ್ಲಿ ನಿನ್ನೆಯ ಗರಿಷ್ಠ 87.27 ಮಟ್ಟ ಮುಟ್ಟಿ, ಅದನ್ನು ಮೀರಿದರೂ ಅಚ್ಚರಿ ಪಡಬೇಕಿಲ್ಲ ಎಂದು ತಜ್ಞರು ಚರ್ಚಿಸುತ್ತಿದ್ದಾರೆ.