ಬೆಂಗಳೂರು: ಹಲವಾರು ವರ್ಷಗಳಿಂದಲೂ ಸಾಮಾಜಿಕ ಪಿಡುಗಾಗಿರುವ ‘ಬಾಲ್ಯವಿವಾಹ’(Child marriage) ಸಾಕಷ್ಟು ಕಠಿಣ ಕಾನೂನುಗಳ ಮಧ್ಯೆಯೂ ಎಗ್ಗಿಲ್ಲದೆ ಸಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ಅಲ್ಲದೇ, ಅಂಕಿ- ಅಂಶ ಕೇಳಿದರೆ ಪ್ರಜ್ಞಾವಂತರಿಗೆ ಆತಂಕವಾಗುತ್ತಿದೆ.
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 2 ಸಾವಿರಕ್ಕೂ ಅಧಿಕ ಬಾಲ್ಯ ವಿವಾಹಗಳು ನಡೆದಿವೆ. 2020ರ ಏಪ್ರಿಲ್ ನಿಂದ 2024ರ ಅಂತ್ಯದ ವೇಳೆಗೆ 2,188 ಬಾಲ್ಯವಿವಾಹ ನಡೆದಿವೆ ಎಂದು ಹೇಳಲಾಗುತ್ತಿದೆ.
ಬಾಲ್ಯ ವಿವಾಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಅವಧಿಯಲ್ಲಿ ಒಟ್ಟು 13,045ಕ್ಕೂ ಹೆಚ್ಚು ದೂರು ಸ್ವೀಕರಿಸಲಾಗಿದ್ದು, ಅದರಲ್ಲಿ 10,885 ಬಾಲ್ಯವಿವಾಹಗಳನ್ನು ತಡೆಯಲಾಗಿದೆ. 2,188 ಬಾಲ್ಯವಿವಾಹ ಕೇಸ್ ನಲ್ಲಿ 1,945 ಬಾಲ್ಯವಿವಾಹದ ವಿರುದ್ದ FIR ದಾಖಲಾಗಿವೆ. ಅಲ್ಲದೇ, 243 ಬಾಲ್ಯವಿವಾಹದ ವಿರುದ್ದ ಎಫ್‌ಐಆರ್ (FIR) ದಾಖಲಾಗಿಲ್ಲ.
ಈ ಪೈಕಿ ಮಂಡ್ಯ (mandya)ಜಿಲ್ಲೆಯಲ್ಲಿ ಅತೀ ಹೆಚ್ಚು ಬಾಲ್ಯವಿವಾಹ ಪ್ರಕರಣಗಳು ಬೆಳಕಿಗೆ ಬಂದಿವೆ. ಜಿಲ್ಲೆಯಲ್ಲಿ ಒಟ್ಟು 266 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿವೆ. ಶಿವಮೊಗ್ಗ- 222, ಮೈಸೂರು- 203 ಪ್ರಕರಣಗಳು ದಾಖಲಾಗಿವೆ. ಇನ್ನುಳಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಪ್ರಕರಣಗಳು ವರದಿಯಾಗಿವೆ.