ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಗ್ಗಿಲ್ಲದೆ ಮತಾಂತರ ನಡೆಯುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. ಮತಾಂತರಿಗಳು ಈಗ ಆನ್ಲೈನ್ ಮೂಲಕ ತಮ್ಮ ಪ್ರಯತ್ನ ನಡೆಸುತ್ತಿದ್ದಾರೆ. ನಿಮಗೆ ಕೆಲಸ ಇಲ್ವಾ? ಮದುವೆ ಜೀವನದಲ್ಲಿ ಸಮಸ್ಯೆ ಇದೆಯಾ? ಹಾಗಾದರೆ ಇದನ್ನು ಸ್ಕ್ಯಾನ್ ಮಾಡಿ ನಿಮ್ಮ ಜೀವನ ಬದಲಾಗುತ್ತದೆ ಎಂದು ಆಮಿಷ ಒಡ್ಡುವ ಮೂಲಕ ಕಷ್ಟದಲ್ಲಿದ್ದ ಜನರನ್ನು ಸೆಳೆದು ಮತಾಂತರ ಮಾಡಲು ಯತ್ನಿಸುತ್ತಿದ್ದಾರೆ.
ರಸ್ತೆಯಲ್ಲಿ ಓಡಾಡುವವರಿಗೆಲ್ಲಾ ಕ್ಯೂ ಆರ್ ಕೋಡ್(QR code) ಇರುವ ವಿಸಿಟಿಂಗ್ ಕಾರ್ಡ್ (Visiting card) ನೀಡಿ, ಮತಂತರಕ್ಕೆ ಯತ್ನಿಸಲಾಗುತ್ತಿದೆ. ಅವರು ನೀಡಿದ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಕ್ರೈಸ್ತ ಧರ್ಮದ ಬಗೆಗಿನ ಮಾಹಿತಿಯನ್ನು ಲಿಂಕ್ ನೀಡುತ್ತದೆ.
ಹೀಗೆ ರಸ್ತೆಯಲ್ಲೇ ನಿಂತು ವಿಸಿಟಿಂಗ್ ಕಾರ್ಡ್ ಕೊಟ್ಟು ಆಮಿಷವೊಡ್ಡುವಾಗಲೇ ಮಹಿಳೆಯೊಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ. ಬೇಗೂರು ವ್ಯಾಪ್ತಿಯ ಮುಖ್ಯ ರಸ್ತೆಯಲ್ಲಿ ಈ ಮತಾಂತರ ವಿಷಯ ಬೆಳಕಿಗೆ ಬಂದಿದೆ. ರಸ್ತೆಯಲ್ಲೇ ಮತಾಂತರ ಮಾಡಲು ಬಂದವರ ಚಳಿ ಬಿಡಿಸಿದ್ದಾರೆ. ವಿಸಿಟಿಂಗ್ ಕಾರ್ಡ್ ನೀಡುತ್ತಿದ್ದಂತೆ ಸ್ಕ್ಯಾನ್ ಮಾಡಿ ನೋಡಿದ ಮಹಿಳೆ, ತರಾಟೆಗೆ ತೆಗೆದುಕೊಂಡಿದ್ದಾರೆ.
ಕ್ಯೂರ್ ಕೋಡ್ ಸ್ಕ್ಯಾನ್ ಮಾಡಿದರೆ, ಬೈಬಲ್ ಏಕೆ ಬರುತ್ತದೆ ಎಂದು ಪ್ರಶ್ನಿಸಿದ್ದಾರೆ. ಆಗ ಮತಾಂತರಕ್ಕೆ ಯತ್ನಿಸುತ್ತಿದ್ದ ಮಹಿಳೆಯರು, ಒಳ್ಳೆಯ ಸಂದೇಶ ನೀಡುತ್ತಿದ್ದೇವೆ ಎಂದು ನುಣುಚಿಕೊಳ್ಳಲು ಯತ್ನಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಅಧಿಕಾರಿಗಳು ಮತಾಂತರಿಗಳಿಗೆ ತಕ್ಕ ಪಾಠ ಕಲಿಸಬೇಕೆಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.