ನವ ದೆಹಲಿ: ವಿರಾಟ್ ಕೊಹ್ಲಿ 13 ವರ್ಷಗಳ ನಂತರ ದೇಶೀಯ ಕ್ರಿಕೆಟ್‌ಗೆ (cricket)ಮರಳಿದರೂ ದೊಡ್ಡ ಪ್ರಭಾವ ಬೀರುವಲ್ಲಿ ವಿಫಲಗೊಂಡಿದ್ದಾರೆ. ಆದರೆ ಅವರು ಇದ್ದ ಕಾರಣ ಡೆಲ್ಲಿ ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ ಎಂಬುದಾಗಿ ಕ್ರಿಕೆಟ್ ವಿಶ್ಲೇಷಕರು ಹೇಳಿದ್ದಾರೆ. ಹೀಗಾಗಿ ಅವರು ಭವಿಷ್ಯದಲ್ಲಿ ರಣಜಿ ಟ್ರೋಫಿಗಳಲ್ಲಿ (Ranji Trophy) ಆಡಲಿದ್ದಾರೆ ಎಂಬುದಾಗಿ ಅವರೆಲ್ಲರೂ ಆಶಿಸಿದ್ದಾರೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ರಾಷ್ಟ್ರೀಯ ಆಟಗಾರರು ತಮ್ಮ ರಾಷ್ಟ್ರೀಯ ಕರ್ತವ್ಯಗಳಲ್ಲಿ ಇರದಾಗ ಮತ್ತು ಫಿಟ್ ಆಗಿರುವಾಗ ದೇಶೀಯ ಕ್ರಿಕೆಟ್ ಆಡುವುದು ಕಡ್ಡಾಯ ಎಂದು ಹೇಳಿತ್ತು. ಹೀಗಾಗಿ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ರಣಜಿ ಟ್ರೋಫಿಗೆ ಮರಳಿದ್ದರು. 36 ವರ್ಷದ ಈ ಆಟಗಾರನಿಗೆ ನಿರೀಕ್ಷೆಯಂತೆ ಆಡಲು ಸಾಧ್ಯವಾಗಲಿಲ್ಲ. ಕೊಹ್ಲಿ ಕೆಂಪು ಚೆಂಡಿನ ಕ್ರಿಕೆಟ್‌ನಲ್ಲಿ ತಮ್ಮ ಫಾರ್ಮ್ ಪುನಃ ಪಡೆಯಲು ಬಯಸಿದ್ದರೂ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಮಾತ್ರ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿತ್ತು.
ಕೇವಲ 6 ರನ್ ಗಳಿಸಿದ ಕೊಹ್ಲಿ
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 2024-25ರ ರಣಜಿ ಟ್ರೋಫಿಯ ಅಂತಿಮ ಗುಂಪು ಹಂತದ ಪಂದ್ಯದಲ್ಲಿ, ಡೆಲ್ಲಿ ತಂಡವು ರೈಲ್ವೇಸ್ ವಿರುದ್ಧ ಒಂದು ಇನ್ನಿಂಗ್ಸ್ ಮತ್ತು 19 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು. ಕೊಹ್ಲಿ ಕೇವಲ 6 ರನ್ ಗಳಿಸಿದ್ದರೂ, ಅವರ ಅನುಭವ ಮತ್ತು ಹಾಜರಾತಿ ತಂಡದ ಆಟಗಾರರಿಗೆ ಮಹತ್ವದ ಪ್ರೇರಣೆ ನೀಡಿತ್ತು. ಹೀಗಾಗಿ ಗೆಲುವು ಸುಲಭವಾಯಿತು.
ಸಾಧ್ಯವೋ ದೇಶೀಯ ಕ್ರಿಕೆಟ್ ಆಡುತ್ತಾರೆ: ಡೆಲ್ಲಿ ಕೋಚ್ ಸರಂದೀಪ್ ಸಿಂಗ್
ಡೆಲ್ಲಿ ತಂಡದ ರಣಜಿ ಟ್ರೋಫಿ 2024-25ರ ಪ್ರಯಾಣ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಮುಕ್ತಾಯವಾದ ನಂತರ ಮಾತನಾಡಿದ ಕೋಚ್ ಸರಂದೀಪ್ ಸಿಂಗ್,(Sardeep Singh) ಕೊಹ್ಲಿ ಮುಂದೆಯೂ ಅವಕಾಶ ದೊರಕಿದರೆ ದೇಶೀಯ ಕ್ರಿಕೆಟ್‌ನಲ್ಲಿ ಆಡಲು ಬಯಸುತ್ತಾರೆ ಎಂದು ಹೇಳಿದ್ದಾರೆ. ಅವರ ಬುದ್ಧಿವಂತಿಕೆ ಮತ್ತು ಅನುಭವ ಯುವ ಆಟಗಾರರಿಗೆ ಸಹಾಯ ಮಾಡಲಿದೆ ಎಂದು ಆಶಿಸಿದ್ದಾರೆ.
ಅವರಿಗೆ ನಿಜವಾದ ಬದ್ಧತೆ ಇದೆ. ಅವರು ಲಭ್ಯವಿರುವಾಗ ಖಂಡಿತವಾಗಿಯೂ ದೇಶೀಯ ಕ್ರಿಕೆಟ್ ಆಡಲು ಬಯಸುತ್ತಾರೆ. ಅವರ ಬಿಡುವಿಲ್ಲದ ಅಂತರಾಷ್ಟ್ರೀಯ ವೇಳಾಪಟ್ಟಿಯಿಂದಾಗಿ ಅವರು ಎಲ್ಲ ಪಂದ್ಯಗಳಲ್ಲಿ ಆಡಲು ಸಾಧ್ಯವಿಲ್ಲ, ಎಂದು ಸರಂದೀಪ್ ಸಿಂಗ್ ತಿಳಿಸಿದರು.
ತಂಡದ ಆತ್ಮವಿಶ್ವಾಸ ಹೆಚ್ಚಳ
ಕೊಹ್ಲಿ ತಮ್ಮ ಬ್ಯಾಟಿಂಗ್ ಮೂಲಕ ಹೆಚ್ಚಿನ ಪ್ರಭಾವ ಬೀರದಿದ್ದರೂ, ತಂಡದ ಯುವ ಆಟಗಾರರಿಗೆ ಮಾರ್ಗದರ್ಶನೆ ಮಾಡಿದ್ದರು. ಅವರು ಪ್ರತಿದಿನ ಬೆಳಗ್ಗೆ 8 ಗಂಟೆಗೆ ಬಂದು ಅಭ್ಯಾಸ ಮಾಡುತ್ತಿದ್ದರು, 9-9:30ರ ವೇಳೆಗೆ ಇತರ ಆಟಗಾರರೊಂದಿಗೆ ನೆಟ್ ಸೆಷನ್‌ನಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರ ಇರುವಿಕೆಯಿಂದ ಯುವ ಆಟಗಾರರು ಹೆಚ್ಚಿನ ಪ್ರೇರಣೆ ಪಡೆದುಕೊಂಡಿದ್ದಾರೆ. ಅವರು ಪ್ರತಿದಿನ ಆಟಗಾರರಿಗೆ ಶಿಸ್ತುಬದ್ಧ ಕ್ರಿಕೆಟ್ ಹೇಗೆ ಆಡಬೇಕು ಎಂಬುದನ್ನು ವಿವರಿಸುತ್ತಿದ್ದರು. ಶಿಸ್ತು ಕೇವಲ ಮೈದಾನದಲ್ಲಿ ಮಾತ್ರವಲ್ಲ, ಮೈದಾನದ ಹೊರಗೆಯೂ ಇರಬೇಕು ಎಂಬುದಾಗಿ ಅವರು ಸಲಹೆ ನೀಡಿದರು,ʼʼ ಎಂದು ಸರಂದೀಪ್ ಹೇಳಿದ್ದಾರೆ.
ಭಾರತ ತಂಡದ ಯಶಸ್ಸಿಗೆ ಕೊಹ್ಲಿ ಮುಖ್ಯ
ಭಾರತದ ಮುಂದಿನ ಸರಣಿಯು ಫೆಬ್ರವರಿ 6ರಿಂದ ಆರಂಭವಾಗಲಿರುವ ಇಂಗ್ಲೆಂಡ್ (England) ವಿರುದ್ಧದ ಮೂರು ಪಂದ್ಯಗಳ ಒಡಿಐ ಸರಣಿಯಲ್ಲಿ ಕೊಹ್ಲಿ ಆಡುವ ನಿರೀಕ್ಷೆಯಿದೆ.
ಬಳಿಕ ಕೊಹ್ಲಿ 2025ರ ಫೆಬ್ರವರಿ 19ರಂದು ಕರಾಚಿಯಲ್ಲಿ ಆರಂಭಗೊಳ್ಳಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ (ICC Champions Trophy) ಟೀಮ್ ಇಂಡಿಯಾದೊಂದಿಗೆ ದುಬೈಗೆ ಪ್ರಯಾಣಿಸಲಿದ್ದಾರೆ. ಭಾರತ ತಂಡವು ಫೆಬ್ರವರಿ 20ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಲಿದೆ. ಈ ಟೂರ್ನಿಯಲ್ಲಿ ಕೊಹ್ಲಿ ತಂಡದ ಯಶಸ್ಸಿಗೆ ಪ್ರಮುಖ ಆಟಗಾರನಾಗುವ ನಿರೀಕ್ಷೆಯಿದೆ.