ನವದೆಹಲಿ: ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೈಕಮಾಂಡ್ ಮಧ್ಯಪ್ರವೇಶಿಸಿ ಈ ಕುಸ್ತಿ ನಿಲ್ಲಿಸುವ ಪ್ರಯತ್ನ ಮಾಡುತ್ತಿಲ್ಲ. ಹೀಗಾಗಿ ಜಗಳ ಅದು ಹಾದಿ ಬೀದಿ ರಂಪವಾಗುತ್ತಿದೆ.
ಈಗ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬದಲಾವಣೆ ಕಿತ್ತಾಟ ಜೋರಾಗಿ ನಡೆದಿದೆ. ಈಗಾಗಲೇ ವಿಜಯೇಂದ್ರ ವಿರುದ್ಧ ಸಮರ ಸಾರಿರುವ ಯತ್ನಾಳ್ ಬಣ ದಿನಕ್ಕೊಂದು ಬಾಣ ಬಿಡುತ್ತಿದೆ. ಅಲ್ಲದೇ, ಈಗ ಯತ್ನಾಳ್ ಆಂಡ್ ಟೀಂ ದೆಹಲಿಗೆ ಶಿಫ್ಟ್ ಆಗಿದ್ದು, ವಿಜಯೇಂದ್ರ ವಿರುದ್ಧ ಹೈಕಮಾಂಡ್ ಮಟ್ಟದಲ್ಲಿ ಅಂತಿಮ ಹಂತದ ಪ್ರಹಾರಕ್ಕೆ ಮುಂದಾಗಿದೆ.
ಈಗಾಗಲೇ ಯತ್ನಾಳ್ ಟೀಂನ ಕೆಲವು ಸದಸ್ಯರ ತಂಡ ದೆಹಲಿ ತಲುಪಿದ್ದು, ಯತ್ನಾಳ್ ಸೇರಿದಂತೆ ಇನ್ನಿತರ ನಾಯಕರು ಫೆ. 4ರಂದು ದೆಹಲಿಗೆ ತೆರಳಲಿದ್ದಾರೆ. ಮೊದಲ ತಂಡದಲ್ಲಿ ರಮೇಶ್ ಜಾರಕಿಹೋಳಿ, ಕುಮರಬಂಗಾರಪ್ಪ, ಶ್ರೀಮಂತ ಪಾಟೀಲ್. ಸಂತೋಷ್ ಎನ್.ಆರ್ ಸೇರಿದಂತೆ ಹಲವರು ಇದ್ದಾರೆ. ಅವರೆಲ್ಲ ಕರ್ನಾಟಕ ಭವನಕ್ಕೆ ತೆರಳಿದ್ದಾರೆ. ನಾಳೆ ಇನ್ನುಳಿದ ನಾಯಕರು ಬಂದ ಬಳಿಕ ಎಲ್ಲರೂ ಸೇರಿಕೊಂಡು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.