ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ (Micro Finance) ಕಿರುಕುಳಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಮೈಕ್ರೋ ಫೈನಾನ್ಸ್ (ದಬ್ಬಾಳಿಕೆ ಮತ್ತು ಅಮಾನವೀಯ ಕ್ರಮಗಳ ನಿಯಂತ್ರಣ) ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸಿಎಂ ಸಿದ್ದರಾಮಯ್ಯ (Siddaramaiah) ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ರಾಜಭವನಕ್ಕೆ ಸುಗ್ರೀವಾಜ್ಞೆ ಕಳುಹಿಸಲಾಗಿದೆ.
ಸುಗ್ರೀವಾಜ್ಞೆಯಂತೆ, ತಪ್ಪಿತಸ್ಥರಿಗೆ 10 ವರ್ಷಗಳ ಕಾಲ ಶಿಕ್ಷೆ ವಿಧಿಸಲು ಅವಕಾಶವಿದೆ. ಅಲ್ಲದೇ, 5 ಲಕ್ಷ ರೂ. ವರೆಗೆ ದಂಡ ವಿಧಿಸುವ ಪ್ರಸ್ತಾಪವಿದೆ. ಅನಧಿಕೃತವಾಗಿ ಸಾಲ ನೀಡಿದ್ದರೆ ಅದನ್ನು ಮನ್ನಾ ಮಾಡಲಾಗುವುದು. ನೋಂದಣಿ ರಹಿತ ಮೈಕ್ರೋ ಫೈನಾನ್ಸ್ ಗಳ ಅಸಲು, ಬಡ್ಡಿ ಕೂಡ ಮನ್ನಾ ಮಾಡಲಾಗುತ್ತದೆ. ಈ ಸುಗ್ರೀವಾಜ್ಞೆಯಿಂದಾಗಿ ಖಾಸಗಿ ಬಡ್ಡಿದಾರರಿಗೂ ಕಡಿವಾಣ ಬೀಳುವಂತಾಗುತ್ತದೆ.
ಸುಗ್ರೀವಾಜ್ಞೆಯಲ್ಲಿನ ಅಂಶಗಳೇನು?
ಲೇವಾದೇವಿದಾರರು ನೋಂದಣಿ ಮಾಡದೆ ಸಾಲ ವಹಿವಾಟು ನಡೆಡಸುವಂತಿಲ್ಲ. ದೂರು ಬಂದರೆ ಅಥವಾ ಸ್ವಯಂಪ್ರೇರಿತವಾಗಿ ನೋಂದಣಿ ರದ್ದು ಮಾಡುವ ಅಧಿಕಾರ ಪ್ರಾಧಿಕಾರಕ್ಕೆ ಇರುತ್ತದೆ. ಸುಗ್ರೀವಾಜ್ಞೆಯಲ್ಲಿನ ನಿಯಮ ಉಲ್ಲಂಘಿಸಿದರೆ, ಪ್ರಾಧಿಕಾರವು ನೋಟಿಸ್ ನೀಡದೆ ನೋಂದಣಿ ಅಮಾನತು ಅಥವಾ ರದ್ದು ಮಾಡಬಹುದು ಎಂಬುವುದು ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಲಾಗಿದೆ.
ಸುಗ್ರೀವಾಜ್ಞೆ ಹೊರಡಿಸಿದ 30 ದಿನಗಳ ಒಳಗೆ ನೋಂದಣಿ ಮಾಡಿಕೊಳ್ಳಬೇಕು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಣಿ ಕಡ್ಡಾಯವಾಗಿರುತ್ತದೆ. ನೋಂದಣಿ ವೇಳೆ ಸಾಲಗಾರರ ಸಂಪೂರ್ಣ ಮಾಹಿತಿ ಸಂಗ್ರಹಿಸಿದ ಲಿಖಿತ ಮುಚ್ಚಳಿಕೆ ನೀಡಬೇಕು. ಸಾಲಗಾರರಿಂದ ಯಾವುದೇ ಅಡಮಾನ ಇಟ್ಟುಕೊಳ್ಳುವಂತಿಲ್ಲ. ಅಡಮಾನ ಇಟ್ಟುಕೊಂಡಿದ್ದರೆ ತಪ್ಪದೇ ಹಿಂತಿರುಗಿಸಬೇಕು. ನೋಂದಣಿ ಮಾಡಿಕೊಳ್ಳದ ಲೇವಾದೇವಿದಾರರಿಗೆ ಸಾಲ ಮರುಪಾವತಿಸುವಂತಿಲ್ಲ. ಅಸಲು, ಬಡ್ಡಿ ಎರಡೂ ಮನ್ನಾ ಆಗಲಿದೆ ಎಂದು ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಲಾಗಿದೆ.