ಬೆಂಗಳೂರು: ಕೇಂದ್ರ ಸರ್ಕಾರದ ಬಜೆಟ್ ಗೆ ಎಲ್ಲ ಕಡೆಯಿಂದಲೂ ಒಳ್ಳೆಯ ಪ್ರಶಂಸೆಯ ಮಾತುಗಳು ಬಂದಿವೆ. ದೇಶದ ಜನತೆ ವಿವಿಧ ರೀತಿಯಲ್ಲಿ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ವಿರೋಧ ಪಕ್ಷವಾಗಿರುವುದರಿಂದ ವಿರೋಧಗಳನ್ನು ಮಾಡಲೇಬೇಕಾಗಿದೆ. ಮಾಡುತ್ತಾರೆ ಅಷ್ಟೆ. ಆದರೆ ಅವರ ಟೀಕೆಗಳಲ್ಲಿ ಹುರುಳಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ.
ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಜೆಟ್ ಬಗ್ಗೆ ದೇಶದ ಎಲ್ಲ ಕಡೆಗಳಿಂದ ಪ್ರಶಂಸೆ ಬಂದಿದೆ. ವಿರೋಧ ಪಕ್ಷಗಳಿಂದ ಟೀಕೆಗಳು ಕೂಡ ಬಂದಿವೆ. ವಿರೋಧ ಪಕ್ಷವಾಗಿ ಪ್ರಶಂಸೆ ಮಾಡುವುದು ಅವರಿಗೆ ಕಷ್ಟ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಸಹಜವಾಗಿ ಟೀಕೆ ಮಾಡಿದೆ. ಬಿಜೆಪಿ ವಿರುದ್ಧ ಮತ್ತು ಬಿಜೆಪಿ ಸರಕಾರದ ವಿರುದ್ಧ ಯಾವಾಗಲೂ ಆಂದೋಲನದ ರೀತಿಯಲ್ಲಿ ಟೀಕೆ ಮಾಡುವುದು ಅವರ ಸಹಜ ನಡವಳಿಕೆ. ಪ್ರಧಾನ ಮಂತ್ರಿ ಅನ್ನುವ ಗೌರವವೂ ಇಲ್ಲದೆ, ರಾಷ್ಟ್ರಪತಿಗಳ ಬಗ್ಗೆಯೂ ಕೆಟ್ಟದಾಗಿ ಮಾತನಾಡುವುದು ಅವರ ನಡವಳಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಡೀ ದೇಶದಲ್ಲಿ ಬಜೆಟ್‌ಗೆ ಅತ್ಯುತ್ತಮ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಮುಖ್ಯಮಂತ್ರಿಗಳಿಂದ ಹಿಡಿದು ಅನೇಕ ಸಚಿವರೂ ಕೂಡ ಕರ್ನಾಟಕಕ್ಕೆ ಲಾಭ ಇಲ್ಲ, ಏನೂ ಸಿಕ್ಕಿಲ್ಲ ಅಂತ ಹೇಳುತ್ತಿದ್ದಾರೆ. ಆದರೆ, ಬಜೆಟ್ ನಲ್ಲಿ ಕಾಂಗ್ರೆಸ್ ನವರಿಗೆ ಏನೂ ಸಿಗದೇ ಇರಬಹುದು. ದೇಶದ ಜನತೆಗೆ ಈ ಬಜೆಟ್‌ನಲ್ಲಿ ಸಾಕಷ್ಟು ಕೊಡುಗೆಗಳು ಸಿಕ್ಕಿವೆ. ಸಾಮಾಜಿಕ ಜಾಲತಾಣಗಳಲ್ಲಿ ದೇಶದ ಜನತೆ ಈ ಬಜೆಟ್ ಅನ್ನು ಸಂಪೂರ್ಣವಾಗಿ- ಸ್ವತಂತ್ರ ಭಾರತದ ಇಷ್ಟು ವರ್ಷಗಳ ಬಜೆಟ್‌ಗಳಲ್ಲಿ ಅತ್ಯುತ್ತಮ, ಮುಂದಾಲೋಚನೆ ಇರುವಂತಹ ಬಜೆಟ್ ಎಂದು ಶ್ಲಾಘಿಸಿದ್ದಾರೆ. ಅಭಿವೃದ್ಧಿ ಪರವಾದ ಬಜೆಟ್ ಎಂದು ಮುಕ್ತ ಕಂಠದಿಂದ ಹೊಗಳಿದ್ದಾರೆ ಎಂದು ಹೇಳಿದ್ದಾರೆ.
ಕರ್ನಾಟಕಕ್ಕೆ ಕಳೆದ ವರ್ಷ 44,485.49 ಕೋಟಿ ರೂ.ಗಳ ನೆರವು ಕೇಂದ್ರದಿಂದ ಕೊಡಬೇಕಾಗಿತ್ತು. ಅದನ್ನೂ ಮೀರಿ, 46,937.72 ಕೋಟಿ ಸಿಕ್ಕಿದೆ. ಆದರೂ ನಮಗೇನೂ ಕೊಟ್ಟಿಲ್ಲ ನಮಗೇನೂ ಕೊಟ್ಟಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. 2,400 ಕೋಟಿ ರೂ. ಹೆಚ್ಚುವರಿ ರಾಜ್ಯ ಸರ್ಕಾರಕ್ಕೆ ಸಿಕ್ಕಿದೆ. ಆದರೂ ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ.
ರೈಲ್ವೇ ಯೋಜನೆಗಳಿಗೆ 7564 ಕೋಟಿ ರೂ. ಕೊಟ್ಟಿದ್ದಾರೆ. ಇದು ನಮಗೆ ಕೊಡುವ ಜಿಎಸ್‌ಟಿ ಹಣದಲ್ಲಿ ಅಲ್ಲ, ಇದು ಪ್ರತ್ಯೇಕ. ಪರಿಶಿಷ್ಟ ಜಾತಿ ವರ್ಗಗಳಿಗೆ ಕರ್ನಾಟಕದ ಬಜೆಟ್ ನಲ್ಲಿ ಸಿದ್ದರಾಮಯ್ಯ ಯಾವ ರೀತಿ ಹೇಳ್ತಾರೆ? 39,000 ಕೋಟಿ ಹಣವನ್ನು ಎಸ್ಸಿ/ಎಸ್ಟಿ ಅಭಿವೃದ್ಧಿಗೆ ಇಟ್ಟಿದ್ದೇವೆ ಅಂತ ಹೇಳ್ತಾರೆ. ಅದರಲ್ಲಿ ಒಂದು ಕೈಯ್ಯಲ್ಲಿ ಕೊಟ್ಟೆ, ಇನ್ನೊಂದು ಕೈಯಲ್ಲಿ ತಗೊಂಡೆ ಅನ್ನುವ ರೀತಿಯಲ್ಲಿ ಗ್ಯಾರಂಟಿಗಳಿಗೆ ವರ್ಗಾವಣೆ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲೇ ಸುಳ್ಳು ಹೇಳಿದರು. 39,000 ಕೋಟಿ ಹಣವನ್ನು ಎಸ್ಸಿ, ಎಸ್ಟಿ ಅಭಿವೃದ್ಧಿಗೆ ಮೀಸಲಿಟ್ಟಿದ್ದೇನೆ. ಕೇಂದ್ರ ಸರಕಾರ ಕೇವಲ 60 ಸಾವಿರ ರೂ. ಕೋಟಿ ಮೀಸಲಿಟ್ಟಿದೆ ಅಂದರು. ಆದರೆ ಅವತ್ತು ಕೂಡ 1.85 ಲಕ್ಷ ಕೋಟಿ ರೂ. ಹಣವನ್ನು ದಲಿತರ ಶ್ರೇಯೋಭಿವೃದ್ಧಿಗೆ ಕೇಂದ್ರ ಸರ್ಕಾರ ಮೀಸಲಿಟ್ಟಿತ್ತು. ಆದರೆ ಸಿದ್ದರಾಮಯ್ಯ ಸರಕಾರ ದಾರಿ ತಪ್ಪಿಸುವ ಕೆಲಸ ಮಾಡಿದರು ಎಂದು ಆರೋಪಿಸಿದ್ದಾರೆ.
36 ಜೀವ ರಕ್ಷಕ ಔಷಧಿಗಳ ಮೇಲಿನ ಆಮದು ಸುಂಕ ರದ್ದು ಮಾಡಿದ್ದಾರೆ. ಅದರ ಮೇಲೆ ಟ್ಯಾಕ್ಸ್ ಇಲ್ಲ. ಇದರಿಂದ ಎಷ್ಟು ಬಡವರಿಗೆ ಅನುಕೂಲ ಆಗುತ್ತದೆ ಎಂದು ಯೋಚನೆ ಮಾಡಬೇಕು. ಪ್ರತಿ ಜಿಲ್ಲೆಯಲ್ಲೂ ಕ್ಯಾನ್ಸರ್ ಚಿಕಿತ್ಸಾ ಘಟಕಗಳನ್ನು ಕೇಂದ್ರದಿಂದ ಮಾಡುತ್ತಾರೆ. ಅಲ್ಲದೆ ಔಷಧಿಗಳ ಬೆಲೆಯನ್ನು ಸಂಪೂರ್ಣ ನಿಯಂತ್ರಣ ಮಾಡುತ್ತಾರೆ. ಆದರೆ, ಕರ್ನಾಟಕ ಸರ್ಕಾರ ಜನೌಷಧಿ ಕೇಂದ್ರಗಳನ್ನೇ ತೆರೆಯುವುದಿಲ್ಲ ಎಂದು ಹೇಳುತ್ತಿದೆ. ಕೇಂದ್ರದಿಂದ ಇರುವ ಸೌಲಭ್ಯಗಳನ್ನು ಕೂಡ ಜನರಿಗೆ ಮುಟ್ಟಿಸಲಾಗದ ಸ್ಥಿತಿಗೆ ಕರ್ನಾಟಕದ ಕಾಂಗ್ರೆಸ್ ಸರಕಾರ ಆಗಿದೆ ಎಂದು ಲೇವಡಿ ಮಾಡಿದ್ದಾರೆ.