ಬೆಂಗಳೂರು: ಸಚಿವರ ಕ್ಷೇತ್ರದಲ್ಲಿ ತ್ಯಾಜ್ಯ ವಿಲೇವಾರಿ ಹೆಸರಿನಲ್ಲಿ ಕೋಟ್ಯಾಂತರ ರೂ. ಹಣ ಲೂಟಿಯಾಗಿದೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ (N.R. Ramesh) ಆರೋಪಿಸಿದ್ದಾರೆ. ಅಲ್ಲದೇ, ಈ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಸಿಲಿಕಾನ್ ಸಿಟಿಯ ಬೇರೆಲ್ಲಾ ಕ್ಷೇತ್ರಗಳ ವಾರ್ಡ್ ಗಳಲ್ಲಿನ SWM ನಿರ್ವಹಣೆಯ ಸರಾಸರಿ ವೆಚ್ಚ 15 ಲಕ್ಷ ರೂ. ಆಗಿದೆ. ಆದರೆ, ದಿನೇಶ್ ಗುಂಡೂರಾವ್ (Dinesh Gundurao) ಕ್ಷೇತ್ರದಲ್ಲಿನ ಪ್ರತಿಯೊಂದು ವಾರ್ಡ್ ನ ಸರಾಸರಿ ವೆಚ್ಚ 36,73,320 ರೂ. ಆಗಿದೆ. ಗಾಂಧಿನಗರ ಕ್ಷೇತ್ರದಲ್ಲಿ ಪ್ರತಿ ದಿನ 3 ಪಾಳಿಗಳಲ್ಲಿ ತ್ಯಾಜ್ಯ ವಿಲೇವಾರಿ ಅಂತ ಹಣ ಲೂಟಿ ಮಾಡಲಾಗುತ್ತಿದೆ. ಆದರೆ, ನಗರದ ಬೇರೆ ಎಲ್ಲಾ ವಾರ್ಡ್ ಗಳಲ್ಲಿ ಪ್ರತಿ ದಿನ ಒಂದು ಬಾರಿ ಕಸ ವಿಲೇವಾರಿ ಮಾಡಲಾಗುತ್ತಿದೆ.
ಬಿಬಿಎಂಪಿ ನಿಯಮದಂತೆ ಬೆಳಗಿನ ಹೊತ್ತು ತ್ಯಾಜ್ಯ ವಿಲೇವಾರಿ(Waste disposal) ಕಾರ್ಯ ಮಾಡಬೇಕು. ಆದರೆ, ವಂಚಕರು ನಕಲಿ ದಾಖಲೆ ಸೃಷ್ಟಿಸಿ ಹಣ ಲೂಟಿ ಮಾಡುತ್ತಿದ್ದಾರೆ. ನಕಲಿ ದಾಖಲೆಗೂ ಪಾಲಿಕೆಯಿಂದ ಹಣ ಬಿಡುಗಡೆ ಮಾಡುತ್ತಿದ್ದಾರೆ. ಇದರಲ್ಲಿ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ನಗರದ 26 ಕ್ಷೇತ್ರಗಳಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯಕ್ಕೆ ಪ್ರತಿ ತಿಂಗಳು 15 ರಿಂದ 16 ಲಕ್ಷ ರೂ. ಖರ್ಚು ತೋರಿಸಲಾಗುತ್ತಿದೆ. ಆದರೆ, ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಪ್ರತಿ ವಾರ್ಡ್ ಗೆ ಬೇರೆ ಕ್ಷೇತ್ರದ ವಾರ್ಡ್ ಗಳಿಗಿಂತ ಎರಡೂವರೆ ಪಟ್ಟು ಹೆಚ್ಚು ಹಣ ವೆಚ್ಚ ಮಾಡಲಾಗುತ್ತಿದೆ.
ಗಾಂಧಿನಗರ ಕ್ಷೇತ್ರದ ವ್ಯಾಪ್ತಿಯ 7 ವಾರ್ಡ್ ಗಳ ತ್ಯಾಜ್ಯ ವಿಲೇವಾರಿ ಕಾರ್ಯಗಳಿಗೆ ಪ್ರತಿ ತಿಂಗಳು 2,57,13,239 ರೂ. ವೆಚ್ಚ ಮಾಡಲಾಗುತ್ತಿದೆ. ಒಂದು ವರ್ಷದಲ್ಲಿ ಒಟ್ಟು 30,85,58,875 ರೂ. ವೆಚ್ಚ ತೋರಿಸಲಾಗುತ್ತಿದೆ.
ಗಾಂಧಿನಗರ ತ್ಯಾಜ್ಯ ವಿಲೇವಾರಿ ಕಾರ್ಯ ಮಾಡುತ್ತಿರುವವರು ಬಹುತೇಕ ಗಾಂಧಿ ನಗರ ಕ್ಷೇತ್ರದಲ್ಲಿ ಬಿಬಿಎಂಪಿ ನೌಕರರ ರಕ್ತ ಸಂಬಂಧಿಗಳೇ ಇದ್ದಾರೆ.
ಕಳೆದ ಮೂರು ವರ್ಷಗಳಿಂದ 90 ಕೋಟಿ ರೂ. ಗೂ ಅಧಿಕ ಹಣ ಲೂಟಿಯಾಗಿದೆ. ಇಂತಹ ಕಾನೂನು ಬಾಹಿರ ಕಾರ್ಯಗಳ ಮೂಲಕ ಪಾಲಿಕೆಯ ಬೊಕ್ಕಸಕ್ಕೆ ಪ್ರತಿ ತಿಂಗಳು ಕೋಟ್ಯಾಂತರ ರೂ. ನಷ್ಟವಾಗುತ್ತಿದೆ ಎಂದು ಆರೋಪಿಸಿರುವ ಎನ್.ಆರ್. ರಮೇಶ್ ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.