ಬೆಂಗಳೂರು: ನಟ ಶರಣ್ ಅಭಿನಯದ ಛೂ ಮಂತರ್ ಸಿನಿಮಾ 25 ದಿನಗಳ ಪ್ರದರ್ಶನ ಕಂಡು ಮುನ್ನುಗ್ಗುತ್ತಿದ್ದು, ಚಿಂತ್ರ ತಂಡದಿಂದ ಸಂಭ್ರಮಾಚರಣೆ ಆಚರಿಸಲಾಯಿತು.
ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸಿರುವ, “ಕರ್ವ” ಖ್ಯಾತಿಯ ನವನೀತ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ. ಈಗ ಈ “ಛೂ ಮಂತರ್” ಚಿತ್ರ ಯಶಸ್ವಿ 25 ದಿನಗಳ ಪ್ರದರ್ಶನ ಕಂಡು, 50 ದಿನಗಳತ್ತ ಮುನ್ನುಗುತ್ತಿದೆ. ಹೀಗಾಗಿ ಸಂಭ್ರಮಚಾರಣೆ ಆಯೋಜಿಸಿ, ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಶ್ರೀಮುರುಳಿ, ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರವೊಂದು ಇಪ್ಪತ್ತೈದು ದಿನಗಳನ್ನು ಪೂರೈಸಿರುವುದು ಖುಷಿಯ ವಿಚಾರ. ಶರಣ್ ಅವರೊಟ್ಟಿಗೆ ಅನೇಕ ಚಿತ್ರಗಳನ್ನು ಮಾಡಿದ್ದೇನೆ. ತರುಣ್ ಕೂಡ ಬಹು ದಿನಗಳ ಗೆಳೆಯ. ಈ ಚಿತ್ರ ಬಿಡುಗಡೆಯಾದಾಗ ನನ್ನ ಸ್ನೇಹಿತರೊಬ್ಬರು ಫೋನ್ ಮಾಡಿ “ಛೂ ಮಂತರ್” ಚಿತ್ರದ ಟಿಕೆಟ್ ಬೇಕು. ಹೌಸ್ ಫುಲ್ ಆಗಿದೆ ಎಂದರು. ಈ ವಿಷಯ ಕೇಳಿ ಸಂತೋಷವಾಯಿತು. ಚಿತ್ರ ನೂರು ದಿನಗಳ ಪ್ರದರ್ಶನ ಕಾಣಲಿ ಎಂದು ಹಾರೈಸಿದರು.

ನಾಯಕ ನಟ ಶರಣ್ ಮಾತನಾಡಿ , ನಮ್ಮ ಚಿತ್ರಕ್ಕಾಗಿ ತೆರೆಯ ಹಿಂದೆ ದುಡಿದ ಬಹುತೇಕ ತಂತ್ರಜ್ಞರು ಬಂದಿದ್ದಾರೆ. ನಿಜವಾಗಲೂ ಚಿತ್ರದ ಗೆಲುವಿಗೆ ಅವರ ಕೊಡುಗೆ ಅಪಾರ. ನಮ್ಮ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಅಂದರೆ ಅದಕ್ಕೆ ಕಾರಣ ಜನರು. ನಮ್ಮ ಚಿತ್ರಕ್ಕೆ ಸಿಗುತ್ತಿರುವ ಮೌತ್ ಪಬ್ಲಿಸಿಟಿಯೇ ಈ ಯಶಸ್ಸಿಗೆ ಕಾರಣ ಎಂದು ಹೇಳಿದರು.
ಚಿತ್ರದ ಯಶಸ್ಸಿಗೆ ಕಾರಣರಾದ ಚಿತ್ರ ತಂಡಕ್ಕೆ ನಿರ್ಮಾಪಕರಾದ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ಧನ್ಯವಾದ ಹೇಳಿದರು. ನಟಿಯರಾದ ಅದಿತಿ ಪ್ರಭುದೇವ ಹಾಗೂ ಮೇಘನಾ ಗಾಂವ್ಕರ್ “ಛೂ ಮಂತರ್” ಚಿತ್ರದ ಯಶಸ್ಸಿನ ಖುಷಿ ಹಂಚಿಕೊಂಡರು.