ಹಾಸನ: ಈಜಲು (Swiming) ಹೋಗಿದ್ದ ಯುವಕರು ನೀರು ಪಾಲಾಗಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಚನ್ನರಾಯಪಟ್ಟಣ (Channarayapatna) ತಾಲೂಕಿನ ಜಿನ್ನಾಪುರ ಗ್ರಾಮದಲ್ಲಿ ನಡೆದಿದೆ. ಯಶ್ವಂತ್ ಸಿಂಗ್ ಅಲಿಯಾಸ್ ಗಣೇಶ್ (29), ರೋಹಿತ್ (28) ನೀರುಪಾಲಾಗಿರುವ ದುರ್ದೈವಿಗಳು. ಸಾವನ್ನಪ್ಪಿರುವ ಯುವಕರು ವೆಲ್ಡಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಭಾನುವಾರ ಎಂದಿನಂತೆ ತಮ್ಮ ಕೆಲಸ ಮುಗಿಸಿ ಸಂಜೆ ವೇಳೆಗೆ ಕೆರೆಗೆ ಈಜಲು ಹೋಗಿದ್ದಾರೆ. ಈಜಲು ಬರುತ್ತಿದ್ದ ರೋಹಿತ್ ಮೊದಲು ಕೆರೆಗೆ ಜಿಗಿದಿದ್ದಾನೆ. ಆದರೆ, ಕೆರೆಯಲ್ಲಿ ಬಳ್ಳಿಗಳು ಇರುವುದರಿಂದಾಗಿ ಆತನ ಕಾಲಿಗೆ ಸುತ್ತಿಕೊಂಡಿವೆ.
ಆಗ ರೋಹಿತ್ ಗೆ ನೀರಿನಿಂದ ಮೇಲೆ ಬರಲು ಆಗಿಲ್ಲ. ಹೀಗಾಗಿ ರೋಹಿತ್ ಕಾಪಾಡುವಂತೆ ಕಿರುಚಾಡಿದ್ದಾನೆ. ಗೆಳೆಯನನ್ನು ರಕ್ಷಿಸಲು ಯಶ್ವಂತ್ ಸಿಂಗ್ ಕೆರೆಗೆ ಜಿಗಿದ್ದಾನೆ. ಆದರೆ, ಬಳ್ಳಿ, ಗಿಡಗಂಟಿಗಳ ಮಧ್ಯೆ ಸಿಲುಕಿದ್ದರಿಂದಾಗಿ ಇಬ್ಬರಿಗೂ ಮೇಲೆ ಬರಲು ಆಗದೆ ಸಾವನ್ನಪ್ಪಿದ್ದಾರೆ.
ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ತಡರಾತ್ರಿ ಶೋಧಕಾರ್ಯ ನಡೆಸಿ ಯುವಕರಿಬ್ಬರ ಶವಗಳನ್ನು ಕೆರೆಯಿಂದ ಹೊರ ತೆಗೆದಿದ್ದಾರೆ. ಈ ಕುರಿತು ಶ್ರವಣಬೆಳಗೊಳ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.