ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಮನೆಯೊಂದು ಮೂರು ಬಾಗಿಲು ಎಂಬ ಪರಿಸ್ಥಿತಿ ಆದರೆ, ಇತ್ತ ಕಾಂಗ್ರೆಸ್‌ನಲ್ಲಿ ಇದಕ್ಕಿಂತ ವಿಭಿನ್ನವಾದ ವಾತಾವರಣ ಏನೂ ಇಲ್ಲ. ದಲಿತ ಸಮುದಾಯಕ್ಕೆ ಸೇರಿದ ಸಚಿವರುಗಳು, ಶಾಸಕರುಗಳು ಈ ವಾರ ದೆಹಲಿಯತ್ತ ಮುಖ ಮಾಡಲಿದ್ದು, ಅಲ್ಲಿ ಹೈಕಮಾಂಡ್ ನಾಯಕರ ಮುಂದೆಯೇ ತಮ್ಮ ಬೇಡಿಕೆಗಳನ್ನು ಮಂಡಿಸಲು ಮುಂದಾಗಿದ್ದಾರೆ. ಹಾಗಾದರೆ, ಸದ್ಯ ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿರುವುದಾದ್ರೂ ಏನು?
ಒಂದು ಕಡೆ ಬಿಜೆಪಿಯಲ್ಲಿ ಬಣ ಬಡಿದಾಟ ದಿನದಿಂದ ದಿನಕ್ಕೆ ಜೋರಾಗುತ್ತಿದ್ದರೆ, ಇತ್ತ ಕಾಂಗ್ರೆಸ್‌ನಲ್ಲೂ ಇದೇ ರೀತಿಯ ವಾತಾವರಣ ನಿರ್ಮಾಣವಾಗಿದೆ. ದಲಿತ ಸಚಿವರುಗಳು, ಶಾಸಕರುಗಳು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ನಿವಾಸದಲ್ಲಿ ಸೇರಬೇಕಿದ್ದ ಸಭೆಯನ್ನು ಮುಂದೂಡಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಟಕ್ಕರ್ ಕೊಡಲು ಕೆಲ ನಾಯಕರುಗಳು ಮುಂದಾಗಿದ್ದಾರೆ. ಸಚಿವರಾದ ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಡಾ.ಹೆಚ್.ಸಿ ಮಹದೇವಪ್ಪ ಹಾಗೂ ಕೆ.ಎನ್. ರಾಜಣ್ಣ ತಂಡವೊಂದನ್ನ ಮಾಡಿಕೊಂಡಿದ್ದು, ಈ ವಾರದಲ್ಲಿ ದೆಹಲಿಗೆ ತೆರಳಲು ವೇದಿಕೆ ಸೃಷ್ಠಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕು. ಬಣ ಬಡಿದಾಟಕ್ಕೆ ಬ್ರೇಕ್ ಬೀಳಬೇಕು. ಸರ್ಕಾರದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆಯನ್ನು ಸೃಷ್ಠಿಸಬೇಕು, ಡಿಸಿಎಂ ಹಾಗೂ ಅವರ ಬೆಂಬಲಿಗರ ಆರ್ಭಟಕ್ಕೆ ಬ್ರೇಕ್ ಹಾಕಬೇಕು ಎಂಬ ವಿಚಾರಗಳನ್ನು ಮುಂದಿಟ್ಟುಕೊಂಡು ದೆಹಲಿಗೆ ತೆರಳಲು ಕಾಂಗ್ರೆಸ್ ನಾಯಕರುಗಳು ಮುಂದಾಗಿದ್ದಾರೆ ಎನ್ನಲಾಗಿದೆ.
ಇತ್ತ ರಾಜ್ಯದಲ್ಲಿ ಯಾವುದೇ ನಾಯಕರುಗಳು ಭೇಟಿ ಮಾಡಿದರೆ ಸಾಕು, ಅದಕ್ಕೆ ಡಿಸಿಎಂ ಡಿಕೆಶಿ ಬೆಂಬಲಿಗರು ಬೇರೆಯದ್ದೇ ಬಣ್ಣ ನೀಡುತ್ತಾರೆ. ನಮ್ಮ ವಿರುದ್ಧ ಪಕ್ಷದ ಚೌಕಟ್ಟಿನಲ್ಲಿ ಕ್ರಮ ಎಂಬ ಬೆದರಿಕೆ ಬರುತ್ತದೆ. ಇದಕ್ಕೆಲ್ಲಾ ಬ್ರೇಕ್ ಹಾಕುವುದು ಅನಿವಾರ್ಯ ಎಂಬ ಕಾರಣಗಳನ್ನು ಹೈಕಮಾಂಡ್ ನಾಯಕರ ಗಮನಕ್ಕೆ ತರಲು ನಾಯಕರು ಈ ಹೆಜ್ಜೆ ಇಡುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಕಾಂಗ್ರೆಸ್‌ನಲ್ಲಿ ಒಂದು ವ್ಯಕ್ತಿ, ಒಂದು ಹುದ್ದೆ ಎಂಬ ನಿಯಮ ಜಾರಿಯಲ್ಲಿದ್ರೂ, ಕಳೆದ ರಾಜ್ಯ ವಿಧಾನಸಭಾ ಚುನಾವಣೆಯ ಬಳಿಕವೇ ಅಧ್ಯಕ್ಷರ ಬದಲಾವಣೆಯಾಗಬೇಕಾಗಿತ್ತು. ಈವರೆಗೂ ಅದು ಆಗಿಲ್ಲ. ಬೇರೆ ಬೇರೆ ಕಾರಣಗಳನ್ನು ತಿಳಿಸಿ, ಪಕ್ಷದ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡಲಾಗಲಿಲ್ಲ. ಹೀಗಾಗಿ, ಮೊದಲು ಪಕ್ಷದ ಅಧ್ಯಕ್ಷರನ್ನು ಬದಲಾವಣೆ ಮಾಡಿ ಎಂದು ನಾಯಕರು ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಂದಾಗುತ್ತಿದ್ದಾರೆ. ಇನ್ನು ಅಹಿಂದ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಮುಂದೆ ಬರಲಿರುವ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆ, 2028 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿಗಳು ಆಗಬೇಕಾಗಿರುವ ಕಾರಣ, ತಕ್ಷಣವೇ ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕು. ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಹಾಗೂ ದಲಿತ ಮತಗಳು ಕ್ರೂಢಿಕರಣ ಆಗಬೇಕು ಅಂದರೆ, ದಲಿತರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ವರಿಷ್ಠರ ಮುಂದೆ ತಿಳಿಸುವವರಿದ್ದಾರೆ.
ಒಟ್ಟಾರೆ, ಈ ವಾರದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಸಚಿವರುಗಳು, ಶಾಸಕರುಗಳು ದೆಹಲಿಯತ್ತ ಮುಖ ಮಾಡಲಿದ್ದು, ಕಾಂಗ್ರೆಸ್‌ನಲ್ಲಿ ಈ ಬಾರಿಯಾದರೂ ಬದಲಾವಣೆ ಆಗುತ್ತಾ ಕಾದು ನೋಡಬೇಕಿದೆ.