ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ(Sonia Gandhi!) ವಿರುದ್ಧ ನ್ಯಾಯಾಲಯಕ್ಕೆ ದೂರು ದಾಖಲಾಗಿದ್ದು, ಫೆ. 10ರಂದು ವಿಚಾರಣೆ ನಿಗದಿಯಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು( Draupadi Murmu) ಅವರನ್ನು ‘ಪೂವರ್ ಲೇಡಿ’ ಎಂದು ಸೋನಿಯಾ ಗಾಂಧಿ ಕರೆದ ಹಿನ್ನೆಲೆಯಲ್ಲಿ ಅವರ ವಿರುದ್ಧ ಬಿಹಾರದ ಮುಜಾಫರ್‌ಪುರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಸುಧೀರ್ ಓಜಾ(Sudhir Ojha) ಎಂಬ ವಕೀಲರು ಶನಿವಾರ ಸಿಜಿಎಂ ನ್ಯಾಯಾಲಯದಲ್ಲಿ ಈ ದೂರು ನೀಡಿದ್ದು, ಫೆ. 10ಕ್ಕೆ ವಿಚಾರಣೆ ನಡೆಯಲಿದೆ.
ಅಲ್ಲದೇ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕೂಡ ಆರೋಪಿಗಳೆಂದು ಹೆಸರಿಸಲಾಗಿದೆ. ದ್ರೌಪದಿ ಮುರ್ಮು ಅವರನ್ನು ಸೋನಿಯಾ ಗಾಂಧಿ ಅವಮಾನಿಸಿದ್ದಾರೆ ಎಂದು ಅರ್ಜಿದಾರ ಸುಧೀರ್ ಆರೋಪಿಸಿದ್ದಾರೆ.
ಸೋನಿಯಾ ಗಾಂಧಿ ಹೇಳಿದ್ದೇನು?
ಬಜೆಟ್ ಅಧಿವೇಶನದ ಸಂದರ್ಭದಲ್ಲಿ ದ್ರೌಪದಿ ಮುರ್ಮು ಅವರ ಭಾಷಣದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸೋನಿಯಾ ಗಾಂಧಿ, ರಾಷ್ಟ್ರಪತಿಗಳ ಭಾಷಣ ಬೋರಿಂಗ್ ಆಗಿತ್ತು. ಭಾಷಣದ ಕೊನೆಯಲ್ಲಿ ‘ಪೂವರ್ ಲೇಡಿ’ ದಣಿದಿದ್ದರು ಎಂದು ಹೇಳಿಕೆ ನೀಡಿದ್ದರು. ಈ ವೇಳೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಇದ್ದರು. ಈ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.