ಸುಡಾನ್‌ನ ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳು(ಆರ್‌ಎಸ್ಎಫ್) ಒಮ್ದುರ್ಮನ್ ಮಾರುಕಟ್ಟೆ ಮೇಲೆ ದಾಳಿ ನಡೆಸಿ, ಸುಮಾರು 54 ಜನರ ಸಾವಿಗೆ ಕಾರಣವಾಗಿವೆ. ಸುಡಾನ್ ಮಾರ್ಕೆಟ್ ದಾಳಿಯಲ್ಲಿ 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.
ಇನ್ನೊಂದೆಡೆ, ಮಾರುಕಟ್ಟೆ ಮೇಲಿನ ದಾಳಿಯನ್ನು ಆರ್‌ಎಸ್ಎಫ್ ಅಲ್ಲಗಳೆದಿದ್ದು, ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿದ್ದು ನಾವಲ್ಲ, ಅಂತಹ ಹೇಯ ಕೃತ್ಯವನ್ನು ನಡೆಸಿರುವುದು ಸುಡಾನ್‌ನ ಸೇನೆ ಎಂದು ಆರೋಪಿಸಿದೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಂಸ್ಕೃತಿ ಸಚಿವ ಖಾಲಿದ್-ಅಲ್ ಅಲೈಸಿರ್ ಅವರು, ಈ ಕ್ರಿಮಿನಲ್ ಕೃತ್ಯವು ಉಗ್ರರ ನೆತ್ತರ ಇತಿಹಾಸಕ್ಕೆ ಮತ್ತೊಂದು ಸೇರ್ಪಡೆ. ಮಾರುಕಟ್ಟೆ ಮೇಲೆ ನಡೆದ ದಾಳಿಯಲ್ಲಿ ಅನೇಕ ಮಹಿಳೆಯರು ಮತ್ತು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಇದು ಅಂತಾರಾಷ್ಟ್ರೀಯ ಮಾನವೀಯ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ಎರಡು ಪಡೆಗಳ ನಡುವೆ 2023ರ ಏಪ್ರಿಲ್‌ನಿಂದಲೇ ಸಂಘರ್ಷ ಆರಂಭವಾಗಿದ್ದು, ಅಂದಿನಿಂದಲೂ ಸುಡಾನ್ ಸೇನೆ ಮತ್ತು ಆರ್‌ಎಸ್ಎಫ್ ನಡುವೆ ಯುದ್ಧ ನಡೆಯುತ್ತಲೇ ಇವೆ. ಈಗಾಗಲೇ ಈ ಸಂಘರ್ಷಕ್ಕೆ 28 ಸಾವಿರ ಮಂದಿ ಬಲಿಯಾಗಿದ್ದಾರೆ. ಲಕ್ಷಾಂತರ ಜನರು ಮನೆಗಳನ್ನು ಕಳೆದುಕೊಂಡು ನಿರ್ವಸಿತರಾದರೆ, ಸುಡಾನ್‌ನ ಅರ್ಧದಷ್ಟು ಜನಸಂಖ್ಯೆ ಹಸಿವಿನಿಂದ ಬಳಲುವಂಥ ಸ್ಥಿತಿ ನಿರ್ಮಾಣವಾಗಿದೆ. ಅನೇಕ ಕುಟುಂಬಗಳು ತಿನ್ನಲು ಆಹಾರವಿಲ್ಲದೇ ಹುಲ್ಲು ತಿಂದು ಬದುಕುವಂಥ ಹೀನಾಯ ಸ್ಥಿತಿಗೆ ಸುಡಾನ್ ತಲುಪಿದೆ.