ವಾಷಿಂಗ್ಟನ್: ಸೊಮಾಲಿಯಾದಲ್ಲಿ ಐಸಿಸ್‌ನ ಪ್ರಮುಖ ಉಗ್ರ ಮತ್ತು ಐಸಿಸ್ ಭಯೋತ್ಪಾದಕ ಸಂಘಟನೆಗೆ ಸೇರಿರುವ ಸ್ಥಳಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಸೇನೆಯು ವೈಮಾನಿಕ ದಾಳಿ ನಡೆಸಿದ್ದು, ಹಲವು ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
“ಐಸಿಸ್ ದಾಳಿಯ ಪ್ರಮುಖ ಸಂಚುಕೋರ ಹಾಗೂ ಇತರೆ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಇಂದು ನಾನು ನಿಖರ ವೈಮಾನಿಕ ದಾಳಿಗೆ ಆದೇಶಿಸಿದ್ದೆ. ಅದರಂತೆ ಅಮೆರಿಕ ಮತ್ತು ನಮ್ಮ ಮಿತ್ರರಾಷ್ಟ್ರಗಳಿಗೆ ಬೆದರಿಕೆ ಹಾಕುತ್ತಿದ್ದ ಹಾಗೂ ಗುಹೆಗಳಲ್ಲಿ ಅವಿತಿದ್ದ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ,” ಎಂದು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಟ್ರುಥ್ ಸೋಷಿಯಲ್ ನಲ್ಲಿ ಬರೆದುಕೊಂಡಿದ್ದಾರೆ.
ನಮ್ಮ ಸೇನೆ ನಡೆಸಿದ ವೈಮಾನಿಕ ದಾಳಿಯಿಂದ ಉಗ್ರರು ಅಡಗಿದ್ದ ಗುಹೆಗಳು ನಾಶವಾಗಿದ್ದು, ಹಲವಾರು ಉಗ್ರರು ಸಾವಿಗೀಡಾಗಿದ್ದಾರೆ. ಆದರೆ ಯಾವುದೇ ನಾಗರಿಕರಿಗೂ ಹಾನಿಯಾಗದಂತೆ ಯಶಸ್ವಿಯಾಗಿ ಈ ಕಾರ್ಯಾಚರಣೆ ಪೂರ್ಣಗೊಳಿಸಲಾಗಿದೆ ಎಂದೂ ಅವರು ಘೋಷಿಸಿದ್ದಾರೆ.
ಅಲ್ಲದೆ, ನಮ್ಮ ದೇಶದ ಸೇನೆಯು ಯಾವತ್ತೋ ಈ ಐಸಿಸ್ ದಾಳಿಕೋರರ ಮೇಲೆ ದಾಳಿ ನಡೆಸಿ, ಅವರನ್ನು ನಿರ್ನಾಮ ಮಾಡಲು ಸಿದ್ಧವಿತ್ತು. ಆದರೆ, ಹಿಂದಿನ ಬೈಡೆನ್ ನೇತೃತ್ವದ ಸರ್ಕಾರವು ಕ್ಷಿಪ್ರವಾಗಿ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಹೀಗಾಗಿ ಯಾವ ಕೆಲಸವೂ ಪೂರ್ಣಗೊಳ್ಳಲಿಲ್ಲ. ಆದರೆ, ನಾನು ಇದನ್ನು ಮಾಡಿ ತೋರಿಸಿದೆ. ಅಮೆರಿಕನ್ನರ ಮೇಲೆ ದಾಳಿ ಮಾಡುವ ಐಸಿಸ್ ಹಾಗೂ ಇತರೆ ಎಲ್ಲರಿಗೂ ನಾನು ನೀಡುವ ಸಂದೇಶ ಒಂದೇ- “ನಾವು ನಿಮ್ಮನ್ನು ಪತ್ತೆಹಚ್ಚಿ, ಕೊಂದು ಹಾಕುತ್ತೇವೆ!,” ಎಂದೂ ಟ್ರಂಪ್ ಬರೆದುಕೊಂಡಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಮೇಲೆ ಅಮೆರಿಕದ ಸೇನೆ ನಡೆಸಿದ ಮೊದಲ ಕಾರ್ಯಾಚರಣೆ ಇದಾಗಿದೆ. ಈ ವೈಮಾನಿಕ ದಾಳಿಯು ಟ್ರಂಪ್ ಅವರ ಆದೇಶದ ಮೇರೆಗೆ ಹಾಗೂ ಸೊಮಾಲಿಯಾ ಸರ್ಕಾರದ ಸಹಯೋಗದೊಂದಿಗೆ ನಡೆದಿದೆ ಎಂದು ಅಮೆರಿಕ ರಕ್ಷಣಾ ಸಚಿವ ಪೀಟ್ ಹೆಗ್‌ಸೆತ್ ಹೇಳಿದ್ದಾರೆ. ಆದರೆ, ಟ್ರಂಪ್ ಆಗಲೀ, ಶ್ವೇತಭವನವಾಗಲೀ ಸೊಮಾಲಿಯಾದಲ್ಲಿ ಹತನಾದ ಐಸಿಸ್ ಸಂಚುಕೋರನ ಹೆಸರನ್ನು ಮಾತ್ರ ಬಹಿರಂಗಪಡಿಸಿಲ್ಲ.
ಆಫ್ರಿಕನ್ ರಾಷ್ಟ್ರಗಳ ಮೇಲಿನ ಹಲವು ದಾಳಿಗಳ ಹಿಂದೆ ಐಸಿಸ್-ಸೊಮಾಲಿಯಾದ ಕೈವಾಡವಿತ್ತು. ಸೊಮಾಲಿಯಾದಲ್ಲಿ ನೂರಾರು ಐಸಿಸ್ ಉಗ್ರರು ಅವಿತಿದ್ದಾರೆ. ಪಂಟ್ಲಾಂಡ್‌ನ ಬಾರಿ ಪ್ರದೇಶದಲ್ಲಿರುವ ಕಾಲ್ ಮಿಸ್ಕಾಟ್ ಪರ್ವತ ಪ್ರದೇಶಗಳ ಗುಹೆಗಳೇ ಇವರಲ್ಲಿ ಅನೇಕರ ಅಡಗುತಾಣಗಳಾಗಿವೆ.