ಹೊಸದಿಲ್ಲಿ: ಶನಿವಾರ (ಫೆ. 1) ತಮ್ಮ 8ನೇ ಬಜೆಟ್ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಕೃಷಿಕರಿಗೆ ನೆರವಾಗುವ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card Loan) ಮೇಲಿನ ಸಾಲದ ಮಿತಿಯನ್ನು ಹೆಚ್ಚಿಸಿದ್ದಾರೆ. ಈ ಹಿಂದೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿ 3 ಲಕ್ಷ ರೂ. ಇತ್ತು. ಇದೀಗ ಅದನ್ನು 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
ಕೆಸಿಸಿ ಮಿತಿ ಹೆಚ್ಚಳದಿಂದ ಏನು ಅನುಕೂಲ?
ಕೆಸಿಸಿ (ಕಿಸಾನ್ ಕ್ರೆಡಿಟ್ ಕಾರ್ಡ್) ರೈತರಿಗೆ, ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಹಾಯ ಮಾಡುತ್ತದೆ. ಸಾಲದ ಮೂಲಕ ಬೆಳೆ ಬೆಳೆದು ಲಾಭ ಪಡೆಯಲು ಸಾಧ್ಯವಿದೆ.
ಕೆಸಿಸಿ ಎಂದರೇನು?
ಕೃಷಿಕರಿಗೆ ನೆರವಾಗಲು ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಬ್ಯಾಂಕ್‌ಗಳು ನೀಡುತ್ತವೆ. ರೈತರಿಗೆ ರಸಗೊಬ್ಬರ, ಬೀಜ, ಕೀಟನಾಶಕ ಇತ್ಯಾದಿ ಕೃಷಿ ಉತ್ಪನ್ನಗಳ ಖರೀದಿಗೆ ಸಾಲ ನೀಡುವುದು ಇದರ ಉದ್ದೇಶ. ಇದರಲ್ಲಿ ಕೃಷಿ ಚಟುವಟಿಕೆಗಳಿಗಾಗಿ ರೈತರು ಒಂದೇ ಸ್ಥಳದಿಂದ ಸಾಲ ಪಡೆಯಬಹುದು ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸರಳವಾಗಿರುತ್ತದೆ. ರೈತರಿಗೆ ಶೇ. 2ರಷ್ಟು ಬಡ್ಡಿ ರಿಯಾಯಿತಿ ನೀಡಲಾಗುತ್ತದೆ. ಜತೆಗೆ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸುವ ರೈತರಿಗೆ ಬಡ್ಡಿದರವನ್ನು ಹೆಚ್ಚುವರಿಯಾಗಿ ಶೇ. 3ರಷ್ಟು ಕಡಿಮೆ ಮಾಡಲಾಗುತ್ತದೆ.
ಯಾರಿಗೆ ಈ ಸಾಲ?
ವಾಣಿಜ್ಯ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಹಣಕಾಸು ಸಂಸ್ಥೆಗಳು ಮತ್ತು ರಾಜ್ಯ ಸಹಕಾರಿ ಸಂಸ್ಥೆಗಳು ಸಾಲ ನೀಡುತ್ತವೆ. ಕೃಷಿ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಸಂಬಂಧಿತ ಪದ್ಧತಿಗಳಲ್ಲಿ ತೊಡಗಿರುವ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುತ್ತವೆ.
ಅರ್ಹತೆಗಳೇನು?
ರೈತರ ಹೆಸರಿನಲ್ಲಿ ಕೃಷಿ ಭೂಮಿ ಇರಬೇಕು ಅಥವಾ ಕೃಷಿಗಾಗಿ ಬಾಡಿಗೆಗೆ ಪಡೆದ ಭೂಮಿ ಇರಬೇಕು.
18-75 ವರ್ಷ ವಯಸ್ಸಿನವರಾಗಿರಬೇಕು.
ಬ್ಯಾಂಕ್ ಉಳಿತಾಯ ಖಾತೆ ಹೊಂದಿರಬೇಕು.
ಕೃಷಿ ಭೂಮಿ ಫಲವತ್ತಾಗಿರಬೇಕು.
ಸಾಲವನ್ನು ಬಳಸಿಕೊಳ್ಳಲು ಪರಿಣಾಮಕಾರಿ ಯೋಜನೆಯನ್ನು ಹೊಂದಿರಬೇಕು.
ಅಗತ್ಯ ದಾಖಲೆಗಳು
ಗುರುತಿನ ಚೀಟಿ (ಆಧಾರ್ ಕಾರ್ಡ್, ವೋಟರ್ ಐಡಿ, ಪ್ಯಾನ್ ಕಾರ್ಡ್, ಲೈಸನ್ಸ್ ಪೈಕಿ ಯಾವುದಾದರೂ ಒಂದು).
ವಿಳಾಸ ದಾಖಲಾತಿ (ಆಧಾರ್ ಕಾರ್ಡ್, ವಿದ್ಯುತ್ ಅಥವಾ ನೀರಿನ ಬಿಲ್, ಬ್ಯಾಂಕ್ ಸ್ಟೇಟ್‌ಮೆಂಟ್, ಬಾಡಿಗೆ ಅಗ್ರಿಮೆಂಟ್, ವೋಟರ್-ಪೈಕಿ ಯಾವುದಾದರೋ ಒಂದು).
ಭೂಮಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು.
ಪಾಸ್‌ಪೋರ್ಟ್ ಗಾತ್ರದ ಫೋಟೊ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ರೈತರು ಆನ್‌ಲೈನ್ ಮತ್ತು ಅಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.