ಮಂಗಳೂರು: ಬಲ ಹೆಚ್ಚಳಕ್ಕಾಗಿ ಪ್ರಾಣಿ ಬಲಿ ಸರಣಿ ನಡೆಸಿ ಅದರ ರಕ್ತವನ್ನು ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಮತ್ತು ಆರ್ಟಿಐ ಕಾರ್ಯಕರ್ತ ಗಂಗರಾಜು ಫೋಟೋಗೆ ಹಚ್ಚಿ ಪೂಜೆ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಡಿಯೋ ವಶಪಡಿಸಿಕೊಂಡಿರುವ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈಗ ಅಚ್ಚರಿಯ ಮತ್ತೊಂದು ವಿಷಯ ಹೊರ ಬಿದ್ದಿದೆ.
ಅದೇ ಪ್ರಕರಣದ ಚೀಟಿಯಲ್ಲಿ ಪ್ರಸಾದ್ ಅತ್ತಾವರ (Prasad Attavar) ಪತ್ನಿ, ಉಡುಪಿ ಮಹಿಳಾ ಠಾಣೆಯ ಪಿಎಸ್‌ಐ ಸುಮಾ ಆಚಾರ್ಯ ಹೆಸರು ಇದೆ. ಮಂಗಳೂರಿನ ಸ್ಪಾ ಮತ್ತು ಪಾರ್ಲರ್ ಮೇಲೆ ನಡೆದಿದ್ದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ರಾಮಸೇನಾ ಮುಖ್ಯಸ್ಥ ಪ್ರಸಾದ್ ಅತ್ತಾವರ್ ನನ್ನು ಬಂಧಿಸಲಾಗಿತ್ತು. ಅವರ ಮೊಬೈಲ್ ಪರಿಶೀಲನೆ ವೇಳೆ ಈ ವಿಷಯ ಬೆಳಕಿಗೆ ಬಂದಿತ್ತು.
ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜುಗೆ ಬಲ ತುಂಬಲು 5 ಕುರಿಗಳನ್ನು ದೇವಿಗೆ ಬಲಿ ಕೊಟ್ಟಿರುವ ವಿಡಿಯೋ ಇತ್ತು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಷಯ ಬಯಲಾಗಿದ್ದು, ಆಶ್ಚರ್ಯ ಹಾಗೂ ಆತಂಕಕ್ಕೆ ಕಾರಣವಾಗುತ್ತಿದೆ.