ಬೆಂಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು. ಸಭೆಯ ನಂತರ ಜಿಲ್ಲಾಧಿಕಾರಿ ಜಗದೀಶ್ ಮಾಹಿತಿ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ತಡೆಯ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿದೆ.
ಮೈಕ್ರೋ ಫೈನಾನ್ಸ್ ಸಿಬ್ಬಂದಿ ಆರ್ ಬಿಐ ಗೈಡ್ ಲೈನ್ಸ್ ನಂತೆ ನಡೆದುಕೊಳ್ಳಬೇಕು. ಕೆಲವು ಸಂಸ್ಥೆಗಳು ಮಾತ್ರ ಅಧಿಕೃತವಾಗಿವೆ. ಹಲವು ಫೈನಾನ್ಸ್ ಗಳು ಯಾವುದೇ ರಿಜಿಸ್ಟ್ರಾರ್ ಆಗದೆ, ಜನರಿಗೆ ದುಡ್ಡು ಕೊಟ್ಟು ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿವೆ. ಈ ಎಲ್ಲ ರೀತಿಯ ದೂರುಗಳನ್ನು ಪರಿಶೀಸಿಲಲು ಜಿಲ್ಲಾ ಕೋರ್ ಕಮಿಟಿ ರಚಿಸಲಾಗಿದೆ ಎಂದಿದ್ದಾರೆ.
ಜಿಲ್ಲಾ ಮಟ್ಟದ ಅಧಿಕಾರಿಗಳು ಕೋರ್ ಕಮಿಟಿಯಲ್ಲಿದ್ದಾರೆ. ತಾಲೂಕು ಮಟ್ಟದಲ್ಲಿ ಕೂಡ ಕೋರ್ ಕಮಿಟಿ ಮಾಡಿದ್ದೇವೆ. ನೊಂದ ಜನರಿಗಾಗಿ ಹೆಲ್ಪ್ ಲೈನ್ ನ್ನು ಕೂಡ ತೆರೆಯಲಾಗುತ್ತಿದೆ. ಕಿರುಕುಳಕ್ಕೆ ಒಳಗಾಗುತ್ತಿರುವವರು 0802211292/08022967200/ 9741442241ಗೆ ಕರೆ ಮಾಡಿ ದೂರು ನೀಡಬಹುದು. ಅಲ್ಲದೇ, ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಬಹುದು. ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮೋಟೋ ಕೇಸ್ ಹಾಕಲು ಕೂಡ ಅವಕಾಶವಿದೆ ಎಂದು ಹೇಳಿದ್ದಾರೆ.