ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಅಮೆರಿಕದ ಕೇಂದ್ರ ತನಿಖಾ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್(ಎಫ್‌ಬಿಐ)ಗೆ ಮುಖ್ಯಸ್ಥರಾಗಿ ನೇಮಕಗೊಂಡಿರುವ ಭಾರತ ಮೂಲದ ಕಶ್ ಪಟೇಲ್(44) ಅವರು ಅಲ್ಲಿನ ಸಂಸತ್‌ನಲ್ಲಿ “ಜೈ ಶ್ರೀ ಕೃಷ್ಣ” ಘೋಷಣೆ ಮೊಳಗಿಸಿದ್ದಾರೆ. ಸೆನೆಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಭಾಷಣ ಮಾಡಿದ ಗುಜರಾತ್ ಮೂಲದ ಕಶ್ ಪಟೇಲ್, “ಜೈ ಶ್ರೀ ಕೃಷ್ಣ” ಎಂದು ಹೇಳುತ್ತಾ ತಮ್ಮ ಹೆತ್ತವರನ್ನು ಸಂಸತ್ ಸದಸ್ಯರಿಗೆ ಪರಿಚಯಿಸಿದ್ದಾರೆ.
ಇದಲ್ಲದೇ ಪಟೇಲ್ ಅವರು ತಮ್ಮ ಹೆತ್ತವರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದವನ್ನೂ ಪಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಒಂದು ವಿಡಿಯೋದಲ್ಲಿ ಭಾರತೀಯ ಮೂಲದ ವಕೀಲರ ಕಶ್ ಪಟೇಲ್ ಅವರು ಗುಜರಾತ್ ಮೂಲದ ತಮ್ಮ ಹೆತ್ತವರ ಕಾಲಿಗೆ ನಮಸ್ಕರಿಸುತ್ತಿರುವುದು ಕಂಡುಬಂದರೆ, ಮತ್ತೊಂದು ವಿಡಿಯೋದಲ್ಲಿ ಅವರು ತಮ್ಮ ಹೆತ್ತವರು ಮತ್ತು ಸಹೋದರಿಯರನ್ನು ಪರಿಚಯಿಸುತ್ತಿರುವ ದೃಶ್ಯ ಕಾಣಿಸುತ್ತದೆ. ಎಫ್‌ಬಿಐ ಮುಖ್ಯಸ್ಥರಾಗಿ ನೇಮಕ ದೃಢೀಕರಿಸುವ ಈ ಕಾರ್ಯಕ್ರಮವನ್ನು ವೀಕ್ಷಿಸಲೆಂದೇ ಅವರ ಕುಟುಂಬ ಸದಸ್ಯರು ಅಮೆರಿಕಕ್ಕೆ ತೆರಳಿದ್ದಾರೆ. ವಿಶೇಷವೆಂದರೆ ಕಶ್ ಪಟೇಲ್ ಅವರು ಈ ಸಮಾರಂಭದಲ್ಲಿ ಹಿಂದೂ ಸಂಪ್ರದಾಯದಂತೆ ಕೆಂಪು-ಹಳದಿ ಬಣ್ಣದ ದಾರ(ಕಲಾವಾ)ವನ್ನೂ ಕಟ್ಟಿಕೊಂಡಿದ್ದರು.
ಈ ವೇಳೆ ಮಾತನಾಡಿದ ಪಟೇಲ್, ” ನಾನು ಇಲ್ಲೇ ಆಸೀನರಾಗಿರುವ ನನ್ನ ತಂದೆಯವರಾದ ಪ್ರಮೋದ್ ಮತ್ತು ತಾಯಿ ಅಂಜನಾ ಅವರನ್ನು ನಿಮಗೆ ಪರಿಚಯಿಸಲು ಇಚ್ಛಿಸುತ್ತೇನೆ. ಅವರು ಭಾರತದಿಂದ ಇಲ್ಲಿಗೆ ಬಂದಿದ್ದಾರೆ. ಹಾಗೆಯೇ ನನ್ನ ಸಹೋದರಿ ನಿಶಾ ಕೂಡ ಸಾಗರ ದಾಟಿ ಇಂದು ನನ್ನೊಂದಿಗಿರಲು ಇಲ್ಲಿಗೆ ಬಂದಿದ್ದಾರೆ. ಜೈ ಶ್ರೀ ಕೃಷ್ಣ,” ಎಂದು ಹೇಳಿದ್ದಾರೆ.
ನಾನು ನನ್ನ ಹೆತ್ತವರ ಕನಸುಗಳನ್ನಷ್ಟೇ ಹೊತ್ತುಕೊಂಡಿಲ್ಲ, ಅದರ ಜೊತೆಗೆ ನ್ಯಾಯದ ಪದ ನಿಂತಿರುವ ಕೋಟ್ಯಂತರ ಅಮೆರಿಕನ್ನರ ಭರವಸೆಗಳೂ ನನ್ನ ಮೇಲಿದೆ ಎಂದಿದ್ದಾರೆ. ನಿಮ್ಮೆಲ್ಲರ ಮಾರ್ಗದರ್ಶನ, ನಿಮ್ಮ ಅಪೂರ್ವ ಬೆಂಬಲ, ಅಗಾಧ ಪ್ರೀತಿ ಇರದೇ ಇರುತ್ತಿದ್ದರೆ ನಾನಿಂದು ಇಲ್ಲಿ ಇರುತ್ತಿರಲಿಲ್ಲ. ಅಧ್ಯಕ್ಷ ಟ್ರಂಪ್ ಅವರು ನನ್ನ ಹೆಸರನ್ನು ಎಫ್‌ಬಿಐ ನಿರ್ದೇಶಕ ಸ್ಥಾನಕ್ಕೆ ಸೂಚಿಸಿರುವುದಕ್ಕೆ ನಾನು ಆಭಾರಿ ಎಂದೂ ಕಶ್ ಪಟೇಲ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ನಾನು ಕೂಡ ಬಾಲ್ಯದಲ್ಲಿ ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿದ್ದೆ ಎಂಬುದನ್ನೂ ಅವರು ಬಹಿರಂಗಪಡಿಸಿದ್ದಾರೆ.