ಭಾರತದಲ್ಲಿ ವಿವಿಐಪಿ ಸಂಸ್ಕೃತಿ ಸಾರ್ವಜನಿಕರಿಗೆ ದೊಡ್ಡ ಪ್ರಮಾಣದ ತೊಂದರೆಯನ್ನು ಉಂಟುಮಾಡುತ್ತದೆ. ರಾಜಕಾರಣಿಗಳು ಸೇರಿದಂತೆ ವಿವಿಐಪಿ ಎನಿಸಿಕೊಂಡವರು ಹೆಚ್ಚಿನ ಸಂಖ್ಯೆಯ ವಾಹನಗಳ ಸಹಿತ ಸಂಚರಿಸುವಾಗ ಸಾರ್ವಜನಿಕರು ಹೋಗುವ ರಸ್ತೆಯನ್ನು ಪೊಲೀಸರು ಮುಚ್ಚುತ್ತಾರೆ. ಇದರಿಂದಾಗಿ ಸಾಮಾನ್ಯ ಜನರಿಗೆ ಹಲವು ಸಮಸ್ಯೆಗಳು ಉಂಟಾಗುತ್ತವೆ. ಇಂತಹ ಹಲವಾರು ಘಟನೆಗಳು ಭಾರತದಲ್ಲಿ ಆಗಾಗ ನಡೆಯುತ್ತಿದ್ದು ಇದೀಗ ಮುಂಬೈನಿಂದ ಮತ್ತೊಂದು ಉದಾಹರಣೆ ಬೆಳಕಿಗೆ ಬಂದಿದೆ.
ಈ ಘಟನೆಯಲ್ಲಿ ವಿವಿಐಪಿಗಾಗಿ ರಸ್ತೆ ಬಂದ್ ಮಾಡಿರುವ ಕಾರಣ ವಿದ್ಯಾರ್ಥಿನಿಯೊಬ್ಬಳು ತನ್ನ ಪರೀಕ್ಷೆ ತಪ್ಪಿಸಬೇಕಾದ ಪರಿಸ್ಥಿತಿ ಎದುರಿಸಿದ್ದಾಳೆ. ಇದಕ್ಕೆ ಕಾರಣ, ಪೊಲೀಸರು ಆಕೆ ಪ್ರಯಾಣ ಮಾಡುತ್ತಿದ್ದ ವಾಹನವನ್ನು ತಡೆದದ್ದು. ಘಟನೆಯ ವಿಡಿಯೊ ವೈರಲ್ ಆಗಿದೆ.
ಈ ವಿಡಿಯೋವನ್ನು Ghar Ke Kalesh ಎಂಬ X (ಹಿಂದಿನ Twitter) ಖಾತೆಯಲ್ಲಿ ಶೇರ್ ಮಾಡಲಾಗಿದೆ. ಪರೀಕ್ಷೆ ತಪ್ಪಿಸಿಕೊಂಡ ವಿದ್ಯಾರ್ಥಿನಿಯೇ ಈ ಘಟನೆಯ ದೃಶ್ಯಗಳನ್ನು ದಾಖಲಿಸಿಕೊಂಡಿದ್ದಾಳೆ. ವಿಡಿಯೋದಲ್ಲಿ, ವಿದ್ಯಾರ್ಥಿನಿ ಪೊಲೀಸರೊಂದಿಗೆ ವಾದ ಮಾಡುತ್ತಿರುವುದನ್ನು ನೋಡಬಹುದು. ಪರೀಕ್ಷೆಗೆ ತಡವಾಗುತ್ತದೆ ಎಂದು ಆಕೆ ತನ್ನ ವಾಹನವನ್ನು ಬಿಡುವಂತೆ ಪೊಲೀಸರನ್ನು ಕೇಳಿಕೊಳ್ಳುತ್ತಾಳೆ. ಆದರೆ, ಫೋನಿನಲ್ಲಿ ಮಾತನಾಡುತ್ತಿದ್ದ ಪೊಲೀಸ್ ಅಧಿಕಾರಿಯು ಆಕೆಯ ಮನವಿ ತಿರಸ್ಕರಿಸುತ್ತಾರೆ.
“ಟ್ರಾಫಿಕ್ ತಡೆಹಿಡಿಯಲು ಆದೇಶವಿದೆ. ಬಿಡುಗಡೆ ಮಾಡಲು ಅನುಮತಿ ದೊರಕಿದ ಮೇಲೆ ಮಾತ್ರ ಬಿಡಬಹುದು” ಎಂದು ಪೊಲೀಸ್ ಅಧಿಕಾರಿ ಹೇಳುತ್ತಾರೆ. ಅಧಿಕಾರಿ ಆದೇಶಗಳನ್ನು ಪಾಲಿಸುತ್ತಿದ್ದರೂ ಪರೀಕ್ಷೆ ವಿಚಾರದಲ್ಲಿ ಆತ ಸ್ವತಂತ್ರ ನಿರ್ಧಾರ ಕೈಗೊಳ್ಳಬಹುದಾಗಿತ್ತು. ಬದಲಿಗೆ, ಅವವರು ವಿದ್ಯಾರ್ಥಿನಿಗೆ ಆಟೋ ರಿಕ್ಷಾ ಬಿಟ್ಟು ನಡೆದುಕೊಂಡು ಹೋಗಿ ಇನ್ನೊಂದು ಆಟೊ ಹಿಡಿದುಕೊಂಡು ಹೋಗುವಂತೆ ಸಲಹೆ ಕೊಟ್ಟಿದ್ದಾರೆ.
ಪೊಲೀಸರ ಸಲಹೆ ಪ್ರಾಯೋಗಿಕವಾಗಿರಲಿಲ್ಲ. ಏಕೆಂದರೆ ರಸ್ತೆಯಲ್ಲಿ ವಾಹನಗಳ ಸಂಚಾರವೇ ನಿಲ್ಲಿಸಿದ್ದರಿಂದ, ಬೇರೆ ಆಟೋಗಳು ಕೂಡ ಹೋಗುತ್ತಿರಲಿಲ್ಲ. ಬಳಿಕ ವಿದ್ಯಾರ್ಥಿನಿ 30 ನಿಮಿಷಗಳ ಕಾಲ ಕಾಯಬೇಕಾಯಿತು. ವಿವಿಐಪಿ ವಾಹನಗಳು ಹೋಗುವಷ್ಟರಲ್ಲಿ ಸಮಯ ಬೆಳಿಗ್ಗೆ 10:30 ಆಗಿತ್ತು. ಆಕೆಯ ಪರೀಕ್ಷೆ ೧೦ ಗಂಟೆಗೆ ಆರಂಭಗೊಂಡಿತ್ತು.
ಈ ಘಟನೆ ನಿಖರವಾಗಿ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬುದನ್ನು ಖಚಿತಪಡಿಸಲಾಗಿಲ್ಲ, ಆದರೆ ಇದು ಮುಂಬೈ ನಗರದ್ದು ಎಂದು ಹೇಳಲಾಗುತ್ತಿದೆ. ಇದು ನಮ್ಮ ದೇಶದ ಗಂಭೀರ ಸಮಸ್ಯೆ. ರಾಜಕಾರಣಿಗಳು ಮತ್ತು ಸಚಿವರು ತಮ್ಮ ಸುರಕ್ಷತೆಗಾಗಿ ಸಂಚಾರ ತಡೆಹಿಡಿಯುವುದರಿಂದ ಸಾಮಾನ್ಯ ಜನತೆ ತೊಂದರೆ ಅನುಭವಿಸುತ್ತಾರೆ. ಆಂಬ್ಯುಲೆನ್ಸ್‌ಗಳು ಕೂಡ ವಿವಿಐಪಿ ವಾಹನಗಳು ಹೋಗುವ ತನಕ ನಿಲ್ಲಿಸಬೇಕಾಗಿರುವ ಉದಾಹರಣೆಗಳು ಕೂಡ ಇವೆ.
ಇದರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತಗೊಂಡಿವೆ. ಹಲವರು “ಇವರು ಸಾರ್ವಜನಿಕ ಸೇವಕರಾದರೂ ತಮ್ಮನ್ನು ವಿವಿಐಪಿ ಎಂದು ಕರೆದುಕೊಳ್ಳುತ್ತಾರೆ. ಇತ್ತೀಚಿನ ಕೆಲವು ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ” ಎಂದು ಟೀಕೆ ಮಾಡಿದ್ದಾರೆ. ಈ ಘಟನೆಯಲ್ಲಿ ಪೊಲೀಸ್ ಅಧಿಕಾರಿಯು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬಹುದಾಗಿತ್ತು.