ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕೃಷ್ಣಾದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತು ಉನ್ನತ ಮಟ್ಟದ ಸಭೆ ನಡೆಯಿತು. ಈ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ವಿಷಯವಾಗಿ ಚರ್ಚೆ ನಡೆಸಲಾಯಿತು.
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ತಪ್ಪಿಸುವ ಉದ್ದೇಶದಿಂದ ರಚಿಸಲಾಗಿರುವ ಸುಗ್ರೀವಾಜ್ಞೆಯಲ್ಲಿನ ಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಬಲಿಷ್ಠ ಕಾಯ್ದೆಯನ್ನು ಆದಷ್ಟು ಬೇಗ ಜಾರಿಗೆ ತರಲು ನಿರ್ಧಾರ ಕೈಗೊಳ್ಳಲಾಯಿತು. ಕಾಯ್ದೆ ಸಂಪೂರ್ಣ ಸಂವಿಧಾನ ಬದ್ಧವಾಗಿದ್ದು, ಯಾವುದೇ ಲೋಪದೋಷಗಳನ್ನು ಹೊಂದಿರಬಾರದು. ಸಾಲಗಾರರು ಎದುರಿಸುತ್ತಿರುವ ಕಿರುಕುಳವನ್ನು ತಪ್ಪಿಸಲು ಹಾಗೂ ಸಾಲ ನೀಡಿದವರು ಬಲವಂತದ ವಸೂಲಿ ಮಾಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಈ ಬಲಿಷ್ಠ ಕಾಯ್ದೆ ರಚಿಸಲಾಗುತ್ತಿದೆ.
ಕಾಯ್ದೆಯಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ದೊರೆಯಲಿದೆ. ಒಂಬುಡ್ಸ್ ಮೆನ್ ಗಳ ನೇಮಕ ಮಾಡಲಾಗುತ್ತದೆ. ಅಮಾನವೀಯವಾಗಿ ಬಲವಂತದ ಸಾಲ ವಸೂಲಾತಿ ಮಾಡುವವರಿಗೆ ಜಾಮೀನು ರಹಿತ ಪ್ರಕರಣ ದಾಖಲು ಸೇರಿದಂತೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶ ಸಿಗಲಿದೆ. ನೋಂದಣಿಯಾಗದ ಲೇವಾದೇವಿಗಾರರ ಕಿರುಕುಳವನ್ನು ತಪ್ಪಿಸಲು ಕಠಿಣ ಕಾನೂನು ಜಾರಿ ಮಾಡಲಾಗುತ್ತಿದೆ. ಪ್ರಸ್ತುತವಿರುವ ಕಾನೂನಿನಲ್ಲಿ ಮೈಕ್ರೋ ಫೈನಾನ್ಸ್ ಗಳ ಕಿರುಕುಳ ನಿಯಂತ್ರಿಸಲು ಹಲವು ಅವಕಾಶಗಳಿದ್ದು, ದೂರು ದಾಖಲು ಮಾಡುವವರೆಗೆ ಕಾಯದೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಲಾಗಿದೆ.
ಆದರೆ, ಸುಗ್ರೀವಾಜ್ಞೆ ಹೊರಡಿಸಲು ಕೆಲವು ತೊಡಕುಗಳು ಎದುರಾಗಿವೆ. ಆರ್ ಬಿಐ ನಿಯಮ ಹಾಗೂ ತಾಂತ್ರಿಕ ಅಂಶಗಳು ಅಡ್ಡಿಯಾಗುತ್ತಿವೆ. ಹೀಗಾಗಿ ಹಿರಿಯ ಅಧಿಕಾರಿಗಳ ಸಮಿತಿ ರಚನೆ ಮಾಡಿ ಕಾನೂನಿನ ಸಾಧಕ-ಬಾಧಕ ಚರ್ಚಿಸಿಗೆ ವರದಿ ನೀಡುವಂತೆ ಸಿಎಂ ಸೂಚಿಸಿದ್ದಾರೆ.
ಸಭೆಯ ನಂತರ ಮಾತನಾಡಿರುವ ಕಾನೂನು ಸಚಿವ ಎಚ್ ಕೆ ಪಾಟೀಲ್, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಮನಿ ಲಾಂಡರ್ಸ್ ಸಾಲ ವಸೂಲಿ ವೇಳೆ ಕಿರುಕುಳ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಹೀಗಾಗಿ ಅಮಾನವೀಯ ನಡವಳಿಕೆ, ಬೇಕಾಬಿಟ್ಟಿ ಬಡ್ಡಿ ನಿಗ್ರಹಕ್ಕೆ ಕಾನೂನು ತರಬೇಕು. ಈ ವಿಚಾರವಾಗಿ ಸಚಿವ ಸಂಪುಟದಲ್ಲಿ ಚರ್ಚಿಸಲಾಗಿದೆ. ಕೆಲವು ಹೊಸ ಅಂಶ ಸೇರಿಸಲು ತೀರ್ಮಾನ ಮಾಡಲಾಗಿದೆ. 4 ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿದೆ. ಕಾನೂನು, ರೆವಿನ್ಯೂ ಮತ್ತು ಫೈನಾನ್ಸ್ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಎಲ್ಲರೂ ಕುಳಿತು ಚರ್ಚೆ ಮಾಡುತ್ತಿದ್ದಾರೆ. ನಾಳೆ ಮಧ್ಯಾಹ್ನ ಅಥವಾ ನಾಡಿದ್ದರ ವೇಳೆಗೆ ಒಂದು ರೂಪ ಬಂದೇ ಬರುತ್ತದೆ ಎಂದು ಹೇಳಿದ್ದಾರೆ.
ಇದನ್ನು ಮತ್ತೆ ಕ್ಯಾಬಿನೆಟ್ ಗೆ ತರುವ ಅವಶ್ಯಕತೆ ಇಲ್ಲ. ಸಿಎಂಗೆ ಅಧಿಕಾರ ಕೊಟ್ಟಿದ್ದರಿಂದಾಗಿ ಕ್ಯಾಬಿನೆಟ್ ಗೆ ತರುವ ಅವಶ್ಯಕತೆ ಇಲ್ಲ. ಅವರು ಸಂಪೂರ್ಣ ನಿರ್ಧಾರ ಕೈಗೊಂಡು ಸುಗ್ರೀವಾಜ್ಞೆ ಹೊರಡಿಸುತ್ತಾರೆ. ಸುಗ್ರೀವಾಜ್ಞೆ ಬಂದ ಮೇಲೆ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ.