ಕೋಲ್ಕತ್ತಾ:
ತರಗತಿಯೊಳಗೇ ಪ್ರೊಫೆಸರ್‌ವೊಬ್ಬರು ಅದೇ ಕಾಲೇಜಿನ ವಿದ್ಯಾರ್ಥಿಯನ್ನು ವಿವಾಹವಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪಶ್ಚಿಮ ಬಂಗಾಳದಲ್ಲಿ ಈ ಘಟನೆ ನಡೆದಿದ್ದು, ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕಾಲೇಜು ಆಡಳಿತ ಮಂಡಳಿ ತನಿಖೆಗೆ ಆದೇಶಿಸಿದೆ.
ಪ.ಬಂಗಾಳದ ನಾದಿಯಾದಲ್ಲಿರುವ ಹರಿಂಘಾಟ ಟೆಕ್ನಾಲಜಿ ಕಾಲೇಜಿನ ಮನಶ್ಶಾಸ್ತ್ರ ವಿಭಾಗದಲ್ಲಿ ಈ ಘಟನೆ ನಡೆದಿದೆ. ಈ ಕಾಲೇಜು ಮೌಲಾನಾ ಅಬುಲ್ ಕಲಾಂ ಆಜಾದ್ ತಂತ್ರಜ್ಞಾನ ವಿವಿಯಡಿ ಕಾರ್ಯನಿರ್ವಹಿಸುತ್ತಿದೆ. ಮಹಿಳಾ ಪ್ರೊಫೆಸರ್ ಪಾಯಲ್ ಬ್ಯಾನರ್ಜಿ ಅವರು ವಧುವಿನಂತೆ ಉಡುಗೆ ತೊಟ್ಟು, ವಿದ್ಯಾರ್ಥಿಯೊಂದಿಗೆ ಹಾರ ಬದಲಾಯಿಸುತ್ತಿರುವ, ಮೊಂಬತ್ತಿಯನ್ನು ಇಟ್ಟು ಅದರ ಸುತ್ತಲೂ ಸಪ್ತಪದಿ ತುಳಿಯುತ್ತಿರುವ ಹಾಗೂ ಹಳದಿ ಶಾಸ್ತ್ರದ ಫೋಟೋಗಳು ಬಹಿರಂಗವಾಗಿವೆ.

ಅಲ್ಲದೆ, ಇತರೆ ವಿದ್ಯಾರ್ಥಿಗಳು ವಧೂವರರಿಗೆ ಕೆಂಪು ಗುಲಾಬಿಯನ್ನು ನೀಡಿ ಹಾರೈಸುತ್ತಿರುವ ಮತ್ತು ವಧುವಿನ ಹಣೆಗೆ ಸಿಂಧೂರ ಹಚ್ಚುತ್ತಿರುವ ವಿಡಿಯೋ ಕೂಡ ವೈರಲ್ ಆಗಿವೆ. ಇದರ ಜೊತೆಗೆ, ವಿಶ್ವವಿದ್ಯಾಲಯದ ಲೆಟರ್ ಹೆಡ್ ನಲ್ಲಿ “ನಾವಿಬ್ಬರೂ ಸತಿ ಪತಿಗಳಾಗುತ್ತಿದ್ದೇವೆ” ಎಂದು ಬರೆದು ಪ್ರೊಫೆಸರ್ ಮತ್ತು ವಿದ್ಯಾರ್ಥಿ ಸಹಿ ಹಾಕಿರುವ, ಇಬ್ಬರ ಪರವಾಗಿ ತಲಾ ಮೂವರು ಸಾಕ್ಷಿಗಳಾಗಿ ಸಹಿ ಹಾಕಿರುವ ಪತ್ರವೂ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಆದರೆ, ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಪಾಯಲ್ ಬ್ಯಾನರ್ಜಿ, ಅದು ನಿಜವಾದ ಮದುವೆಯಲ್ಲ.
ಅದು ಸೈಕಲಾಜಿಕಲ್ ಡ್ರಾಮಾ. ಶೈಕ್ಷಣಿಕ ಕಾರ್ಯಕ್ರಮದ ಭಾಗವಾಗಿ ಅದನ್ನು ಮಾಡಲಾಗಿತ್ತು ಎಂದು ಸಮಜಾಯಿಷಿ ನೀಡಿದ್ದಾರೆ. ಅಲ್ಲದೆ, ನನ್ನ ಚಾರಿತ್ರ್ಯಕ್ಕೆ ಧಕ್ಕೆ ತರಲೆಂದೇ ಈ ವಿಡಿಯೋ ಸೋರಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ, ತನಿಖೆಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ಪಾಯಲ್ ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಲಾಗಿದೆ. ಆಡಳಿತ ಮಂಡಳಿಯು ತನಿಖೆಗಾಗಿ 3 ಸದಸ್ಯರ ಸಮಿತಿ ರಚಿಸಿದೆ. ಸಮಿತಿಯ ವರದಿ ಬರುವವರೆಗೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದೂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಪ್ರೊಫೆಸರನ್ನು ಮದುವೆಯಾಗಿದ್ದಾನೆ ಎನ್ನಲಾದ ವಿದ್ಯಾರ್ಥಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ.