ನವ ದೆಹಲಿ: ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 12 ವರ್ಷದ ಬಳಿಕ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣಕ್ಕೆ ರಣಜಿ ಪಂದ್ಯ ಆಡಲು ಬಂದ ಹಿನ್ನೆಲೆಯಲ್ಲಿ ಅಭಿಮಾನಿಗಳು ಅವರನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಸೇರಿದ್ದರು. ಈ ವೇಳೆ ನೂಕು ನುಗ್ಗಲು ಉಂಟಾಗಿ ಹಲವರು ಗಾಯಗೊಂಡಿದ್ದಾರೆ. ಕ್ರೀಡಾಂಗಣದ ಗೇಟ್ ಸಂಖ್ಯೆ 16ರ ಬಳಿ ತಳ್ಳಾಟ ಸೃಷ್ಟಿಯಾಯಿತು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಗಾಯಗೊಂಡವರಿಗೆ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಚಿಕಿತ್ಸೆ ನೀಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪ್ರಯತ್ನಿಸುವಾಗ ಭದ್ರತಾ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕೆಲವು ಅಭಿಮಾನಿಗಳು ಗಾಯಗೊಂಡ ಕಾರಣ ಮೈದಾನದ ಹೊರಗೆ ಗೊಂದಲ ಸೃಷ್ಟಿಯಾಯಿತು. ಪ್ರವೇಶ ದ್ವಾರದ ಬಳಿ ಒಂದೆರಡು ಅಭಿಮಾನಿಗಳು ಬಿದ್ದು ಗಾಯಗೊಂಡರು. ಘಟನೆಯಲ್ಲಿ ಪೊಲೀಸ್ ಬೈಕ್ ಜಖಂಗೊಂಡಿದ್ದು. ಮಕ್ಕಳನ್ನು ಕರೆದುಕೊಂಡು ಬಂದ ಅಭಿಮಾನಿಗಳು ಅವರನ್ನು ಹೆಗಲ ಮೇಲೆ ಕೂರಿಸಿ ಉಸಿರುಗಟ್ಟುವುದನ್ನು ತಪ್ಪಿಸಿದರು.
ಭದ್ರತೆ ಹೆಚ್ಚಳ
ಆರಂಭದಲ್ಲಿ, ಗೇಟ್ 16 ಸೇರಿದಂತೆ ಕೇವಲ ಮೂರು ಗೇಟ್‌ಗಳನ್ನು ಮಾತ್ರ ತೆರೆಯಲು ನಿರ್ಧರಿಸಲಾಗಿತ್ತು. ಹೆಚ್ಚಿನ ಪ್ರೇಕ್ಷಕರು ಬರುವುದನ್ನು ನೋಡಿದ ಬಳಿಕ ಹೆಚ್ಚುವರಿ ಗೇಟ್‌ಗಳನ್ನು ಡೆಲ್ಲಿ ಕ್ರಿಕೆಟ್ ಸ್ಟೇಡಿಯಮ್ ಅಧಿಕಾರಿಗಳು ತೆರೆದರು.
ದೆಹಲಿ ಗೇಟ್ ಮೆಟ್ರೋ ನಿಲ್ದಾಣಕ್ಕೆ ಹತ್ತಿರವಿರುವ ಗೇಟ್ 16 ಮತ್ತು 17ರ ಹೊರಗೆ ಬೆಳಗ್ಗೆ 8 ಗಂಟೆಯಿಂದಲೇ ಅಭಿಮಾನಿಗಳು ಜಮಾಯಿಸಿದ್ದರು. ಗೇಟ್‌ಗಳನ್ನು ತೆರೆಯುವ ಮೊದಲು ಒಂದು ಗಂಟೆಗೂ ಹೆಚ್ಚು ಕಾಲ ಕಾದಿದ್ದರು. ಹೆಚ್ಚುವರಿ ಪ್ರೇಕ್ಷಕರಿಗೆ ಸ್ಥಳಾವಕಾಶ ಕಲ್ಪಿಸಲು, ಬಿಷನ್ ಸಿಂಗ್ ಬೇಡಿ ಸ್ಟ್ಯಾಂಡ್ ಸಹ ಮುಕ್ತಗೊಳಿಸಲಾಯಿತು. ಆರಂಭದಲ್ಲಿ, ಗೌತಮ್ ಗಂಭೀರ್ ಸ್ಟ್ಯಾಂಡ್‌ಗೆ ಮಾತ್ರ ಪ್ರವೇಶ ನೀಡಲಾಗಿತ್ತು.

ಮುಂಜಾನೆ ಮೂರು ಗಂಟೆಯಿಂದಲೇ ಅಭಿಮಾನಿಗಳ ಆಗಮನ
ಗುರುವಾರ ನಸುಕಿನ ಜಾವ 3 ಗಂಟೆಯಿಂದಲೇ ಅಭಿಮಾನಿಗಳು ಮೈದಾನದತ್ತ ಹೆಜ್ಜೆ ಹಾಕಿದ್ದರು. ಗೇಟ್ 16ರಲ್ಲಿ ಪ್ರೇಕ್ಷಕರು ಒಬ್ಬರನ್ನೊಬ್ಬರು ತಳ್ಳಲು ಆರಂಭಿಸಿದ್ದರು. ಈ ವೇಳೆ ಒಂದಿಬ್ಬರು ಕೆಳಕ್ಕೆ ಬಿದ್ದು, ಗಾಯಗಳಾಗಿವೆ.
ತವರಿನ ಮೈದಾನದಲ್ಲಿ ಕೊಹ್ಲಿ ಅವರ ರಣಜಿ ಪಂದ್ಯವನ್ನು ವೀಕ್ಷಿಸಲು 10,000 ಮಂದಿ ಆಗಮಿಸುವ ನಿರೀಕ್ಷೆಯಿದೆ ಎಂದು ಡಿಡಿಸಿಎ ಹೇಳಿತ್ತು. ಆದರೆ ಅದಕ್ಕಿಂತ ಹೆಚ್ಚಿನ ಜನರು ಬಂದಿದ್ದರು.

ಕೊಹ್ಲಿಯ ಜನಪ್ರಿಯತೆ
‘ನಾನು 30 ವರ್ಷಗಳಿಂದ ದೆಹಲಿ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿದ್ದೇನೆ. ಆದರೆ ರಣಜಿ ಪಂದ್ಯವೊಂದಕ್ಕೆ ಇಷ್ಟು ಜನ ಬಂದಿದ್ದು ನೋಡಿಲ್ಲ. ಇದು ಕೊಹ್ಲಿ ಜನಪ್ರಿಯತೆಗೆ ಸಾಕ್ಷಿ ಎಂದು ಡಿಡಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂದು ಪಂದ್ಯ ಆರಂಭವಾಗುತ್ತಿದ್ದಂತೆಯೇ ಅಭಿಮಾನಿಗಳು ‘ಕೊಹ್ಲಿ, ಕೊಹ್ಲಿ’ ಎಂದು ಜೈಕಾರ ಕೂಗಿದ್ದು ಕಂಡು ಬಂತು.