ಬೆಂಗಳೂರು : ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ದೀಪ್ತಿ ಶರ್ಮಾ(Deepti Sharma) ಉತ್ತರ ಪ್ರದೇಶದ ಡಿಎಸ್‌ಪಿ (ಡೆಪ್ಯುಟಿ ಸೂಪರಿಂಟೆಂಡೆಂಡ್ ಆಫ್ ಪೊಲೀಸ್) ಆಗಿ ನೇಮಕಗೊಂಡಿದ್ದಾರೆ. ಅವರ ಕ್ರೀಡಾ ಸಾಧನೆಗಾಗಿ ಉತ್ತರ ಪ್ರದೇಶ ಸರ್ಕಾರ ಅವರಿಗೆ 3 ಕೋಟಿ ರೂ. ನಗದು ಬಹುಮಾನ ಮತ್ತು ಡೆಪ್ಯುಟಿ ಎಸ್ಪಿ ಹುದ್ದೆಗೆ ನೇಮಕಾತಿ ಪತ್ರ ನೀಡಿ ಗೌರವಿಸಿದೆ.
ಮೊರಾದಾಬಾದ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ದೀಪ್ತಿ ಶರ್ಮಾ ಅವರಿಗೆ ಅಧಿಕೃತವಾಗಿ ಡೆಪ್ಯುಟಿ ಎಸ್‌ಪಿ ಸಮವಸ್ತ್ರ ಹಸ್ತಾಂತರ ಮಾಡಲಾಯಿತು. ಈ ವೇಳೆ ದೀಪ್ತಿ ಅವರ ತಂದೆ ಭಗವಾನ್ ಶರ್ಮಾ(Bhagwan Sharma) ಮತ್ತು ಅವರ ಸಹೋದರರಾದ ಸುಮಿತ್ ಶರ್ಮಾ(Sumit Sharma) ಮತ್ತು ಪ್ರಶಾಂತ್ ಶರ್ಮಾ(Prashant Sharma) ಉಪಸ್ಥಿತರಿದ್ದರು. ಆಗ್ರಾದಲ್ಲಿ ಜನಿಸಿದ ದೀಪ್ತಿ ಕಳೆದ ವರ್ಷ ರಾಜ್ಯ ಸರ್ಕಾರದಿಂದ ತನ್ನ ನೇಮಕಾತಿ ಪತ್ರವನ್ನು ಪಡೆದಿದ್ದರು.
2023ರಲ್ಲಿ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ(Commonwealth Games) ಭಾರತ ತಂಡ ಬೆಳ್ಳಿ ಪದಕ ಗೆಲ್ಲುವಲ್ಲಿ ದೀಪ್ತಿ ನಿರ್ಣಾಯಕ ಪಾತ್ರ ವಹಿಸಿದ್ದರು. ಇದುವರೆಗೂ ಅವರು ಭಾರತ ಪರ 101 ಏಕದಿನ ಪಂದ್ಯದಿಂದ 2,154 ರನ್, 130 ವಿಕೆಟ್ ಕಿತ್ತಿದ್ದಾರೆ. ಟಿ20 ಯಲ್ಲಿ 124 ಪಂದ್ಯಗಳನ್ನಾಡಿ 138 ವಿಕೆಟ್ ಮತ್ತು 1086 ರನ್ ಬಾರಿಸಿದ್ದಾರೆ. ಟೆಸ್ಟ್‌ನಲ್ಲಿ 319 ರನ್ ಮತ್ತು 20 ವಿಕೆಟ್ ಕಲೆಹಾಕಿದ್ದಾರೆ.
‘ನಾನು ಈ ಮೈಲಿಗಲ್ಲು ಸಾಧಿಸಿದ್ದಕ್ಕೆ ಹೆಮ್ಮೆ ಇದೆ. ನನ್ನ ಕುಟುಂಬಕ್ಕೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸಲು ನಾನು ಬಯಸುತ್ತೇನೆ. ಈ ಅವಕಾಶಕ್ಕಾಗಿ ನಾನು ಉತ್ತರ ಪ್ರದೇಶ ಸರ್ಕಾರಕ್ಕೂ ಕೃತಜ್ಞನಾಗಿದ್ದೇನೆ. ನಾನು ಉತ್ತರ ಪ್ರದೇಶ ಪೋಲೀಸ್‌ನಲ್ಲಿ ಈ ಹೊಸ ಪಾತ್ರವನ್ನು ವಹಿಸಿಕೊಂಡಾಗ, ನನ್ನ ಕರ್ತವ್ಯಗಳಿಗೆ ನನ್ನನ್ನು ಸಂಪೂರ್ಣವಾಗಿ ಅರ್ಪಿಸುತ್ತೇನೆ ಮತ್ತು ನಿಮ್ಮ ಬೆಂಬಲಕ್ಕಾಗಿ ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದು ದೀಪ್ತಿ ಶರ್ಮಾ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.