ಬೆಂಗಳೂರು: ನಗರದಲ್ಲಿ ಫೈನಾನ್ಸಿಯರ್ ಕಾಟಕ್ಕೆ ವ್ಯಕ್ತಿಯೊಬ್ಬರು ಬಲಿಯಾಗಿರುವ ಆರೋಪವೊಂದು ಕೇಳಿ ಬಂದಿದೆ. ರಾಜಾಜಿನಗರ ಬಳಿಯ ಪ್ರಕಾಶನಗರದಲ್ಲಿ ಈ ಘಟನೆ ನಡೆದಿದೆ. ದಿನೇಶ್ (Dinesh)ಎಂಬ ಫೈನಾನ್ಸಿಯರ್ ಕಾಟಕ್ಕೆ ಬೇಸತ್ತು ಅರುಣ್ ಎಂಬ ವ್ಯಕ್ತಿ ಆತ್ಮಹತ್ಯೆ (suicied)ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ದಿನೇಶ್ ವ್ಯಾಪಾರಿಯಾಗಿದ್ದು, ಪೂಜಾ ಎಂಟರ್ ಪ್ರೈಸಸ್(Pooja Enterprises) ಎಂಬ ಕಂಪನಿ ಹೊಂದಿದ್ದ. ಅಲ್ಲದೇ, ಬಡ್ಡಿ ಸಾಲ ಕೂಡ ನೀಡುತ್ತಿದ್ದ. ಕೆಲವು ಡಾಕ್ಯೂಮೆಂಟ್ ಗಳು ಮತ್ತು ವಾಹನಗಳನ್ನು ಇಟ್ಟುಕೊಂಡು ಹಣ ನೀಡುತ್ತಿದ್ದ. ಮೃತ ಅರುಣ್ ಕೂಡ ದಿನೇಶ್ ಬಳಿ ಹಣ ಪಡೆದಿದ್ದರು.
20 ದಿನಗಳ ಹಿಂದೆ ಅರುಣ್ ಬಳಿಯಿದ್ದ ಕಾರನ್ನು ಅಡಮಾನವನ್ನಾಗಿ ಇಟ್ಟುಕೊಂಡು ದಿನೇಶ್ 6 ಲಕ್ಷ ರೂ. ಹಣ ನೀಡಿದ್ದ. ಈ ಹಣವನ್ನು ಅರುಣ್ ಜ. 22ರಂದು ಮರಳಿ ಹಣ ನೀಡಬೇಕಿತ್ತು. ಆದರೆ, ಅರುಣ್ ಗೆ 6 ಲಕ್ಷ ರೂ. ಹಣ ಹೊಂದಿಸಲು ಆಗಿರಲಿಲ್ಲ. ಹೀಗಾಗಿ ದಿನೇಶ್ ಗಲಾಟೆ ಮಾಡಿದ್ದ ಎನ್ನಲಾಗಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಹಣ ನೀಡಲು ಆಗಿಲ್ಲವೆಂದರೆ ನೇಣು ಬಿಗಿದುಕೊಂಡು ಸಾಯಿ ಎಂದಿದ್ದ. ಇದರಿಂದಾಗಿ ಮನನೊಂದ ಅರುಣ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಅರುಣ್, ತನ್ನ ಹೆಂಡತಿ ಮಕ್ಕಳನ್ನು ಬೇರೆಡೆ ಕಳಿಸಿ ನಂತರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಮಗನ ಸಾವಿಗೆ ದಿನೇಶ್ ಕಾರಣ ಎಂದು ಮೃತ ಅರುಣ್ ತಂದೆ ದೂರು ನೀಡಿದ್ದಾರೆ. ಈ ಕುರಿತು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.