ಬೆಂಗಳೂರು: ಕರ್ಮ ಬ್ರೋಸ್ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ “ರಾಜು ಜೇಮ್ಸ್ ಬಾಂಡ್ ” ಚಿತ್ರದ “ಕಣ್ಮಣಿ” ಹಾಗೂ ಶೀರ್ಷಿಕೆ ಗೀತೆಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿವೆ. ಹೀಗಾಗಿ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವಂತ ಅಭಿಮಾನಿಗಳು ಮನವಿ ಮಾಡುತ್ತಿದ್ದರು. ಈಗ ಅದಕ್ಕೆ ಕಾಲ ಕೂಡಿ ಬಂದಿದ್ದು, ಜ. 31ರಂದು ರೋರಿಂಗ್ ಸ್ಟಾರ್ ಶ್ರೀಮುರುಳಿ ಟ್ರೇಲರ್ ಅನಾವರಣ ಮಾಡಲಿದ್ದಾರೆ.
ಲಂಡನ್ ಚಿತ್ರೀಕರಣದ ಸನ್ನಿವೇಶಗಳು ಹಾಗೂ ಟೀಸರ್ ಸಹ ಈಗಾಗಲೇ ಜನರನ್ನು ಸೆಳೆದಿವೆ. ಈ ಚಿತ್ರಕ್ಕೆ ದೀಪಕ್ ಮಧುವನಹಳ್ಳಿ ಕ್ಯಾಪ್ ತೊಟ್ಟಿದ್ದಾರೆ. “ಫಸ್ಟ್ ರ‍್ಯಾಂಕ್ ರಾಜು” ಖ್ಯಾತಿಯ ಗುರುನಂದನ್ ನಾಯಕರಾಗಿ ನಟಿಸಿದ್ದಾರೆ. ಮಂಜುನಾಥ್ ವಿಶ್ವಕರ್ಮ (ಲಂಡನ್) ಹಾಗೂ ಕಿರಣ್ ಭರ್ತೂರು(ಕೆನಡಾ) ಬಂಡವಾಳ ಹೂಡಿದ್ದಾರೆ. ಈ ಚಿತ್ರ ಬಿಡುಗಡೆಗೂ ದಿನಾಂಕ ನಿಗದಿಯಾಗಿದ್ದು, ಫೆ. 14ರಂದು ಈ ಚಿತ್ರ ಬಿಡುಗಡೆಯಾಗಲಿದೆ.
ಮನಮೋಹಕ ಕಥೆ, ಹಾಸ್ಯ, ಲಂಡನ್ ನ ಅದ್ಭುತ ದೃಶ್ಯಗಳು ಮತ್ತು ಮಧುರವಾದ ಸಂಗೀತ ಚಿತ್ರದ ಹೈಲೆಟ್ ಆಗಿವೆ. ಈ ಮೂಲಕ ಪ್ರೇಕ್ಷಕರನ್ನು ಆಕರ್ಷಿಸುವ ಭರವಸೆಯನ್ನು ಚಿತ್ರ ಮೂಡಿಸಿದೆ ಎಂದು ನಿರ್ದೇಶಕರು ಹೇಳುತ್ತಿದ್ದಾರೆ. ಗುರುನಂದನ್ ಗೆ ಮೃದುಲಾ ಜೋಡಿಯಾಗಿದ್ದಾರೆ. ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಸೇರಿದಂತೆ ಹಲವರು ನಟಿಸಿದ್ದಾರೆ.
ಮನೋಹರ್ ಜೋಶಿ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಅಮಿತ್ ಚವಳ್ಕರ್ ಅವರ ಸಂಕಲನವಿರುವ “ರಾಜು ಜೇಮ್ಸ್ ಬಾಂಡ್” ಚಿತ್ರಕ್ಕೆ ಜಗದೀಶ್ ನಡನಹಳ್ಳಿ ಸಂಭಾಷಣೆ ಬರೆದಿದ್ದಾರೆ.