ಬೆಂಗಳೂರು: ಮೈಕ್ರೋ ಫೈನಾನ್ಸ್ (Micro Finance) ಕಿರುಕುಳಕ್ಕೆ ಬ್ರೇಕ್ ಹಾಕಬೇಕೆಂದು ರಾಜ್ಯದಲ್ಲಿ ದೊಡ್ಡ ಕೂಗು ಕೇಳಿ ಬರುತ್ತಿತ್ತು. ಈ ಮಧ್ಯೆ ಹೊಸ ಕಾನೂನು ನಾಳೆಯ ಕ್ಯಾಬಿನೆಟ್‌ನಲ್ಲಿ (Cabinet) ತರಲಿದ್ದು, ಸುಗ್ರೀವಾಜ್ಞೆ (Ordinance) ಮೂಲಕ ಈ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಹೇಳಿದ್ದಾರೆ.
ಯಾರಿಗಾದರೂ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಿದರೆ ಕೂಡಲೇ ಪೊಲೀಸರಿಗೆ ದೂರು ನೀಡಬೇಕು. ಇತ್ತೀಚೆಗಷ್ಟೇ ನಡೆದ ಸಭೆಯಲ್ಲಿ ಸಿಎಂ ಪೊಲೀಸರಿಗೆ ಈ ಕುರಿತು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇಂತಹ ಕೇಸ್ ಬಗ್ಗೆ ಸುಮೋಟೋ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದೇವೆ. ಮೈಕ್ರೋ ಫೈನಾನ್ಸ್ ಕಾನೂನು ಮಾಡುವ ಕುರಿತು ಸಭೆ ಕರೆದಿದ್ದೇವೆ. ಇವತ್ತು ಬಿಲ್ ಬಗ್ಗೆ ನಾನು, ಕಾನೂನು ಸಚಿವರು, ಕಂದಾಯ ಸಚಿವರು ಸಭೆ ನಡೆಸಲಿದ್ದೇವೆ. ನಾಳೆಯೇ ಕ್ಯಾಬಿನೆಟ್ ನಲ್ಲಿ ಸುಗ್ರೀವಾಜ್ಞೆ (Ordinance) ಹೊರಡಿಸಲು ಕ್ರಮ ತೆಗೆದುಕೊಂಡು ರಾಜ್ಯಪಾಲರಿಗೆ ಕಳಿಸುತ್ತೇವೆ ಎಂದು ಹೇಳಿದ್ದಾರೆ.
ಈಗಾಗಲೇ SP-DCಗಳ ಸಭೆ ಮಾಡಿ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದೇವೆ. ಸಹಾಯವಾಣಿ ಕೂಡ ಪ್ರಾರಂಭ ಮಾಡಿದ್ದೇವೆ. ಜಿಲ್ಲಾಧಿಕಾರಿಗಳಿಗೆ ಅಧಿಕಾರ ಕೊಡುವುದು ಮತ್ತು ಇದಕ್ಕಾಗಿ ಒಂದು ಪ್ರತ್ಯೇಕ ವಿಂಗ್ ಪ್ರಾರಂಭ ಮಾಡುವುದು ಬಿಲ್ ನಲ್ಲಿ ಅಡಕವಾಗಿವೆ ಎಂದು ಹೇಳಿದ್ದಾರೆ.