ಪ್ರಯಾಗರಾಜ್: ಮಹಾ ಕುಂಭಮೇಳ ನಡೆಯುತ್ತಿರುವ ಪ್ರಯಾಗರಾಜ್ ನ ಸಂಗಮ್ ಘಾಟ್ ನಲ್ಲಿ ಕಾಲ್ತುಳಿತ (Maha Kumbh Stampede) ಉಂಟಾಗಿ 15ಕ್ಕೂ ಹೆಚ್ಚು ಜನ ಮೃತಪಟ್ಟಿರುವ ಘಟನೆಯು ದೇಶವನ್ನೇ ಆತಂಕಕ್ಕೆ ದೂಡಿದೆ. ಇಡೀ ನಗರದಲ್ಲೀಗ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಸಾಧು-ಸಂತರು ಕೂಡ ಆತಂಕ್ಕಕೀಡಾಗಿದ್ದಾರೆ. ಅಷ್ಟಕ್ಕೂ, ಕುಂಭಮೇಳ ನಡೆಯುವ ಸ್ಥಳಗಳಲ್ಲಿ ಕಾಲ್ತುಳಿತದಂತಹ ದುರಂತ ಸಂಭವಿಸುತ್ತಿರುವುದು ಇದೇ ಮೊದಲಲ್ಲ. 1954ರಿಂದಲೂ ಹಲವು ಬಾರಿ ಕಾಲ್ತುಳಿತ ಉಂಟಾಗಿ, ಯಾತ್ರಿಕರು ಅಸುನೀಗಿದ್ದಾರೆ.
1954ರಲ್ಲಿ 800 ಮಂದಿ ದುರ್ಮರಣ
1954ರ ಫೆಬ್ರವರಿ 3ರಂದು ಪ್ರಯಾಗರಾಜ್ ನಲ್ಲಿ (ಆಗ ಅಲಹಾಬಾದ್) ಮೌನಿ ಅಮಾವಾಸ್ಯೆ ದಿನವೇ ಭಾರಿ ಕಾಲ್ತುಳಿತ ಸಂಭವಿಸಿತ್ತು. ಪುಣ್ಯಸ್ನಾನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸುಮಾರು 800 ಮಂದಿ ಅಸುನೀಗಿದ್ದರು. ಸಾವಿರಾರು ಜನ ದುರಂತದಲ್ಲಿ ಗಾಯಗೊಂಡಿದ್ದರು. 1986ರಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದ ವೇಳೆಯೂ ಜನರಿಂದ ನೂಕುನುಗ್ಗಲು ಉಂಟಾಗಿ ಸಂಭವಿಸಿದ ಕಾಲ್ತುಳಿತದಲ್ಲಿ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.
2003ರಲ್ಲಿ 39 ಮಂದಿ ಬಲಿ
ಮಹಾರಾಷ್ಟ್ರದ ನಾಶಿಕ್ ನಲ್ಲಿ 2003ರಲ್ಲಿ ನಡೆದ ಕುಂಭಮೇಳದ ವೇಳೆಯೂ ಕಾಲ್ತುಳಿತ ಉಂಟಾಗಿತ್ತು. ಗೋದಾವರಿ ನದಿಯಲ್ಲಿ ಪುಣ್ಯಸ್ನಾನ ಮಾಡುವಾಗ ನೂಕುನುಗ್ಗಲು ಉಂಟಾಗಿದ್ದು ಕಾಲ್ತುಳಿತಕ್ಕೆ ಕಾರಣವಾಗಿತ್ತು. ಮಹಿಳೆಯರು ಸೇರಿ 39 ಮಂದಿ ಸಾವಿಗೀಡಾಗಿದ್ದರು. ಇನ್ನು 2013ರಲ್ಲಿ ಪ್ರಯಾಗರಾಜ್ ನಲ್ಲಿ ಕುಂಬಮೇಳ ನಡೆಯುತ್ತಿರುವ ವೇಳೆ ಪ್ರಯಾಗರಾಜ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿತ್ತು. ದುರ್ಘಟನೆಯಲ್ಲಿ 42 ಜನ ಮೃತಪಟ್ಟು, 45 ಮಂದಿ ಗಾಯಗೊಂಡಿದ್ದರು.
ಈಗ ಮತ್ತೆ ಪ್ರಯಾಗರಾಜ್ ಮಹಾ ಕುಂಭಮೇಳದ ವೇಳೆಯೇ ಕಾಲ್ತುಳಿತ ಸಂಭವಿಸಿರುವುದು ಯಾತ್ರಿಕರು ಭಯಪಡುವಂತಾಗಿದೆ. ಕಾಲ್ತುಳಿತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂಚಿಂಚೂ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡೆಯುತ್ತಿದ್ದಾರೆ.