ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್ ಮಹಾ ಕುಂಭಮೇಳದ ಕಾಲ್ತುಳಿತವು ಕೋಟ್ಯಂತರ ಜನರನ್ನು ಬೆಚ್ಚಿಬೀಳಿಸಿದೆ. ದೇಶದ ಗಮನವೀಗ ಮಹಾ ಕುಂಭಮೇಳದ ಮೇಲಿದೆ. ಸುಮಾರು 15 ಮಂದಿ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಯೋಗಿ ಆದಿತ್ಯನಾಥ್ ಅವರು ನಾಲ್ಕು ಬಾರಿ ಕರೆ ಮಾಡಿ ದುರಂತದ ಬಗ್ಗೆ ಮಾಹಿತಿ ಪಡೆದಿದ್ದಾರೆ.
“ಪ್ರಯಾಗರಾಜ್ ನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ. ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ. ನರೇಂದ್ರ ಮೋದಿ ಅವರೇ ನಾಲ್ಕು ಬಾರಿ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಭಕ್ತರಿಗೆ ಬೇಕಾದ ಎಲ್ಲ ನೆರವು ನೀಡಲು ಆದೇಶಿಸಲಾಗಿದೆ” ಎಂದು ಯೋಗಿ ಆದಿತ್ಯನಾಥ್ ಅವರು ಮಾಹಿತಿ ನೀಡಿದ್ದಾರೆ.
ಪುಣ್ಯಸ್ನಾನ ರದ್ದುಗೊಳಿಸಿದ ಸನ್ಯಾಸಿಗಳು
ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪ್ರಯಾಗರಾಜ್ ನಲ್ಲಿ ಸುಮಾರು 10 ಕೋಟಿ ಜನ ಸೇರಿದ್ದಾರೆ. ಇದರಿಂದಾಗಿ ಕಾಲ್ತುಳಿತ ಉಂಟಾಗಿದೆ ಎಂದು ತಿಳಿದುಬಂದಿದೆ. ಇದರ ಮಧ್ಯೆಯೇ, ಸನ್ಯಾಸಿಗಳು ಪುಣ್ಯಸ್ನಾನ ಮಾಡದಿರಲು ತೀರ್ಮಾನಿಸಿದ್ದಾರೆ. ಇದರ ಕುರಿತು ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಾಂತ ರವೀಂದ್ರ ಪುತಿ ಮಾಹಿತಿ ನೀಡಿದ್ದು, “ಪರಿಸ್ಥಿತಿ ಬಿಗಡಾಯಿಸಿದ ಕಾರಣ ಸಾಧು-ಸಂತರು ಪುಣ್ಯಸ್ನಾನ ಮಾಡದಿರಲು ತೀರ್ಮಾನಿಸಿದ್ದಾರೆ” ಎಂಬುದಾಗಿ ಮಾಹಿತಿ ನೀಡಿದ್ದಾರೆ.
ಗದ್ದಲದ ಮಧ್ಯೆಯೇ 5.5 ಕೋಟಿ ಜನರಿಂದ ಸ್ನಾನ
ಗದ್ದಲ, ಗಲಾಟೆ, ನೂಕುನುಗ್ಗಲಿನ ಮಧ್ಯೆಯೇ ತ್ರಿವೇಣಿ ಸಂಗಮದಲ್ಲಿ 5.5 ಕೋಟಿ ಜನ ಪುಣ್ಯಸ್ನಾನ ಮಾಡಿದ್ದಾರೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ಆದರೆ, ಕಾಲ್ತುಳಿತದ ಬಳಿಕ ಜನ ವಿಚಲಿತರಾಗಿದ್ದು, ಹೆಚ್ಚಿನ ಜನ ಸ್ನಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ದುರಂತದ ಬಳಿಕ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಆಂಬುಲೆನ್ಸ್ ಸೇರಿ ಹಲವು ವೈದ್ಯಕೀಯ ವ್ಯವಸ್ಥೆಯನ್ನೂ ಮಾಡಲಾಗಿದೆ.