ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ವೇಳೆ ಭಾರಿ ಕಾಲ್ತುಳಿತ (Kumbh Mela Stampede) ಉಂಟಾಗಿದ್ದು, ಸುಮಾರು 10 ಯಾತ್ರಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೌನಿ ಅಮಾವಾಸ್ಯೆಯ ಪವಿತ್ರ ದಿನವೇ ದುರ್ಘಟನೆ ಸಂಭವಿಸಿದ್ದು, ಭಾರಿ ಆತಂಕ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ, ಕಾಲ್ತುಳಿತದ ಕುರಿತು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದು, ಪುಣ್ಯಸ್ನಾನ ಮಾಡಿದವರು ತೆರಳಲು ವ್ಯವಸ್ಥೆ ಮಾಡದಿರುವುದೇ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.
“ತ್ರಿವೇಣಿ ಸಂಗಮ ಸ್ಥಳದಲ್ಲಿ ಕೋಟ್ಯಂತರ ಜನ ಸೇರಿದ್ದರು. ಆದರೆ, ಜನದಟ್ಟಣೆಯನ್ನು ನಿಯಂತ್ರಿಸಲು ಹೆಚ್ಚಿನ ಪೊಲೀಸರನ್ನು ನಿಯೋಜಿಸಿರಲಿಲ್ಲ. ಹಾಗೆಯೇ, ಪುಣ್ಯಸ್ನಾನ ಮಾಡಿದವರು ತ್ರಿವೇಣಿ ಸಂಗಮದಿಂದ ತೆರಳಲು ವ್ಯವಸ್ಥೆ ಮಾಡಿರಲಿಲ್ಲ. ಸರಿಯಾದ ಸುರಕ್ಷತೆ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ಜನಜಂಗುಳಿ ಉಂಟಾಗಿ, ಕಾಲ್ತುಳಿತ ಸಂಭವಿಸಿತು” ಎಂದು ಪ್ರತ್ಯಕ್ಷದರ್ಶಿ ವಿನಯ್ ಕುಮಾರ್ ಎಂಬುವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಾಲ್ತುಳಿತದಲ್ಲಿ ಹೆಂಡತಿಯನ್ನು ಕಳೆದುಕೊಂಡವರೊಬ್ಬರು ಕೂಡ ಮಾಧ್ಯಮದವರೊಂದಿಗೆ ಮಾತನಾಡಿದ್ದು, “ಮಧ್ಯರಾತ್ರಿ 12.30ರ ಸುಮಾರಿಗೆ ನಾವು ಪುಣ್ಯಸ್ನಾನ ಮುಗಿಸಿಕೊಂಡು ತೆರಳುತ್ತಿದ್ದೆವು. ಅದಾಗಲೇ ಹೆಚ್ಚಿನ ಜನ ಇದ್ದೆವು. ಇದೇ ವೇಳೆ, ಗೇಟ್ ಗಳನ್ನು ಓಪನ್ ಮಾಡಲಾಯಿತು. ಆಗ ಲಕ್ಷಾಂತರ ಜನ ತ್ರಿವೇಣಿ ಸಂಗಮದತ್ತ ನುಗ್ಗಿದರು. ಇದರಿಂದಾಗಿ ಕಾಲ್ತುಳಿತ ಸಂಭವಿಸಿತು. ಕಾಲ್ತುಳಿತದಲ್ಲಿ ನನ್ನ ಹೆಂಡತಿ ತೀರಿಕೊಂಡಳು” ಎಂದು ದುಃಖತಪ್ತವಾಗಿ ಘಟನೆಯ ಮಾಹಿತಿಯನ್ನು ನೀಡಿದ್ದಾರೆ.
ಕರ್ನಾಟಕದ ಸರೋಜಿನಿ ಎಂಬ ಮಹಿಳೆಯೂ ದುರಂತದ ಬಗ್ಗೆ ಮಾಹಿತಿ ನೀಡಿದ್ದಾರೆ. “ನಾವು ಕುಟುಂಬದ ಸಮೇತ ಪುಣ್ಯಸ್ನಾನ ಮಾಡಲು ತೆರಳಿದ್ದೆವು. ಇದೇ ವೇಳೆ ನೂಕುನುಗ್ಗಲು ಉಂಟಾಯಿತು. ಜನರ ಗುಂಪಿನಿಂದ ನಾವು ಎಷ್ಟೇ ಪ್ರಯತ್ನ ಮಾಡಿದರೂ ಅಲ್ಲಿಂದ ಹೊರಬರಲು ಆಗಲಿಲ್ಲ. ಅಷ್ಟೊತ್ತಿಗಾಗಲೇ ಕಾಲ ಮಿಂಚಿತ್ತು. ಕಾಲ್ತುಳಿತ ಉಂಟಾಗಿ ಹಲವರು ಮೃತಪಟ್ಟರು” ಎಂದು ತಿಳಿಸಿದ್ದಾರೆ. ದುರಂತದ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಕ್ರಿಯಿಸಿದ್ದು, ಪರಿಸ್ಥಿತಿ ತಹಬಂದಿಗೆ ಬಂದಿದೆ ಎಂದಷ್ಟೇ ಹೇಳಿದ್ದಾರೆ.