ಬೆಂಗಳೂರು: ಕಳೆದ ಆವೃತ್ತಿಯ ಪಿಕೆಎಲ್‌ನ ಕಳಪೆ ಪ್ರದರ್ಶನದ ಪರಿಣಾಮ ಫ್ರಾಂಚೈಸಿ ಮೇಲೆ ಬೀರಿದೆ. 11 ವರ್ಷಗಳ ಕಾಲ ಕೋಚ್ ಆಗಿದ್ದ ರಣಧೀರ್ ಸಿಂಗ್ ಸೆಹ್ರಾವತ್ (Randhir Singh Sehrawat) ಅವರನ್ನು ಬಿಡುಗಡೆ ಮಾಡಲಾಗಿದೆ. ಇದೀಗ ಕನ್ನಡಿಗರೇ ಆಗಿರುವ ಬಿ.ಸಿ ರಮೇಶ್ ಅವರನ್ನೇ ನೇಮಕ ಮಾಡಿದೆ. ರಣಧೀರ್ ನಿರ್ಗಮನ ಹಾಗೂ ಹೊಸ ನೇಮಕದ ಕುರಿತು ಫ್ರಾಂಚೈಸಿಯ ಮಾಹಿತಿಯನ್ನು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ದೃಢಪಡಿಸಿದೆ.
ಬುಲ್ಸ್ ಸೀಸನ್ ಒಂದರಲ್ಲಿ ರಣಧೀರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿತು. 11 ಸೀಸನ್‌ಗಳಿಗೆ ಒಬ್ಬರೇ ತರಬೇತುದಾರರಾಗಿದ್ದರು. ಒಂದು ಬಾರಿ ತಂಡ ಚಾಂಪಿಯನ್ ಆಗಿತ್ತು. ಈ ಮೂಲಕ ದೀರ್ಘ ಕಾಲ ಕೋಚ್ ಉಳಿಸಿಕೊಂಡ ಏಕೈಕ ಫ್ರಾಂಚೈಸಿ ಎಂಬ ಖ್ಯಾತಿ ಹೊಂದಿದ್ದರು.
ರಣಧೀರ್ ಸಿಂಗ್ ಸೆಹ್ರಾವತ್ ಅವರ ಮಾರ್ಗದರ್ಶನದಲ್ಲಿ ಬೆಂಗಳೂರು ಬುಲ್ಸ್ ತಂಡ ಹಲವು ಬಾರಿ ಸೆಮಿಫೈನಲ್‌ಗೆ ತಲುಪಿದೆ. ಆರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಆವೃತ್ತಿಯಲ್ಲಿ ರಮೇಶ್ ಅವರು ಸಹಾಯಕ ಕೋಚ್ ಆಗಿದ್ದರು. ಇನ್ನೂ ಪಿಕೆಎಲ್ ಸೀಸನ್ ಎರಡರಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿತು.
11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ನೀರಸ ಪ್ರದರ್ಶನ ತೋರಿದ್ದ ಬುಲ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು.
ಹಿಂದಿನ ಆವೃತ್ತಿಯಲ್ಲಿ ಪುಣೇರಿ ಪಲ್ಟನ್ಸ್ ತಂಡದ ತರಬೇತುದಾರರಾಗಿದ್ದ ಬಿ.ಸಿ.ರಮೇಶ್ ಮುಂದಿನ ಆವೃತ್ತಿಯಲ್ಲಿ ಬುಲ್ಸ್ ಆಟಗಾರರಿಗೆ ಮಾರ್ಗದರ್ಶನ ಮಾಡಲಿದ್ದಾರೆ.
ಅರ್ಜುನ ಪ್ರಶಸ್ತಿ ಪುರಸ್ಕೃತ, ಭಾರತದ ಮಾಜಿ ಕಬಡ್ಡಿ ಆಟಗಾರರಾಗಿರುವ ಬಿ.ಸಿ.ರಮೇಶ್ ಕುಮಾರ್ ಪ್ರೋ ಕಬಡ್ಡಿ ಲೀಗ್‌ನ ಯಶಸ್ವಿ ಕೋಚ್‌ಗಳಲ್ಲಿ ಒಬ್ಬರು. 2018ರಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ಸಹಾಯಕ ಕೋಚ್ ಆಗಿದ್ದ ರಮೇಶ್ ಕುಮಾರ್, ತಂಡ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಮೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ 2019ರಲ್ಲಿ ಬೆಂಗಾಲ್ ವಾರಿಯರ್ಸ್ ಹಾಗೂ 2023ರಲ್ಲಿ ಪುಣೇರಿ ಪಲ್ಟನ್ಸ್ ತಂಡಗಳು ತಮ್ಮ ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿದ್ದವು.
ಕಳೆದ ಆವೃತ್ತಿಯ ಅಂತ್ಯದ ಬಳಿಕ ಪುಣೇರಿ ಪಲ್ಟನ್ಸ್ ತಂಡದ ಹೆಡ್ ಕೋಚ್ ಹುದ್ದೆಯಿಂದ ಹೊರಬಂದಿದ್ದ ರಮೇಶ್ ಕುಮಾರ್ ಅವರನ್ನ ಮತ್ತೊಮ್ಮೆ ಬೆಂಗಳೂರು ಬುಲ್ಸ್ ಫ್ರಾಂಚೈಸಿ ತನ್ನ ತಂಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ.