ಮೈಸೂರು: ರಾಜ್ಯದಲ್ಲಿ ದಿನೇದಿನೆ ಮೈಕ್ರೋ ಫೈನಾನ್ಸ್ (Micro Finance) ಸಂಸ್ಥೆಗಳ ಹಾವಳಿ ಜಾಸ್ತಿಯಾಗುತ್ತಿದೆ. ಸಾಲ ತೀರಿಸುವಂತೆ ಕಿರುಕುಳ ನೀಡುತ್ತಿರುವ ಕಾರಣ ಜನರೀಗ ಊರುಗಳನ್ನೇ ತೊರೆಯುತ್ತಿದ್ದಾರೆ. ಮರ್ಯಾದೆಗೆ ಅಂಜಿ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆಯಲ್ಲಿಯೇ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ತಾಳದೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದಲ್ಲಿ ಜಯಶೀಲಾ ಎಂಬ ಮಹಿಳೆಯು ವಿಷದ ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ತಾಲೂಕಿನ ಮಲ್ಕುಂಡಿ ಗ್ರಾಮದಲ್ಲಿ 35 ವರ್ಷದ ಕೂಲಿ ಕಾರ್ಮಿಕ ಕೃಷ್ಣಮೂರ್ತಿ ಎಂಬುವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳ ತಾಳದೆ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಜಯಶೀಲಾ ಅವರು ಐಐಎಫ್ ಎಲ್, ಫೈವ್ ಸ್ಟಾರ್ ಎಂಬ ಮೈಕ್ರೋ ಫೈನಾನ್ಸ್ ಕಂಪನಿಗಳಲ್ಲಿ ಮೂರು ಲಕ್ಷ ಸಾಲ ಮಾಡಿದ್ದರು. ಆದರೆ, ಸಾಲ ನೀಡಿದ ಕಂಪನಿಗಳು ಇತ್ತೀಚೆಗೆ ಸಾಲ ತೀರಿಸುವಂತೆ ಕಿರುಕುಳ ನೀಡಿದ್ದವು. ಇದರಿಂದ ಮನನೊಂದ ಜಯಶೀಲಾ ಅವರು ಜೋಳದ ಕಾಳುಗಳಿಗೆ ಹಾಕುವ ವಿಷದ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ, ಕೂಲಿ ಕಾರ್ಮಿಕರಾಗಿದ್ದ ಕೃಷ್ಣಮೂರ್ತಿ ಅವರು ಮನೆ ಕಟ್ಟಿಸಲು ಸುಮಾರು ಐದು ಸಂಘಗಳಲ್ಲಿ ಸಾಲ ಮಾಡಿಕೊಂಡಿದ್ದರು. ಆದರೆ, ಸಾಲ ತೀರಿಸಲಾಗದ ಕಾರಣ ಇತ್ತೀಚೆಗೆ ಸಂಘಗಳ ಸಿಬ್ಬಂದಿಯು ಮನೆ ಜಪ್ತಿ ಮಾಡುವ ಬೆದರಿಕೆ ಹಾಕಿದ್ದರು. ಹಾಗಾಗಿ, ಬೇರೆಡೆ ಸಾಲ ಪಡೆಯಲು ಕೃಷ್ಣಮೂರ್ತಿ ಅವರು ಪ್ರಯತ್ನಿಸಿದ್ದರು. ಆದರೆ, ಯಾರೂ ಸಾಲ ನೀಡದ ಕಾರಣ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ಮೈಕ್ರೋ ಫೈನಾನ್ಸ್ ಕಂಪನಿಗಳ ಸಿಬ್ಬಂದಿಯ ಕಿರುಕುಳವೇ ಕಾರಣ ಎಂದು ದೂರು ನೀಡಲಾದ ಕಾರಣ ಎಂಟು ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆದಾಗ್ಯೂ, ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಸಿಎಂ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಇಷ್ಟಾದರೂ ಕಿರುಕುಳ ಪ್ರಕರಣಗಳು ನಿಲ್ಲುತ್ತಿಲ್ಲ.