ಬೆಂಗಳೂರು: ರಾಜ್ಯ ಬಿಜೆಪಿ ಈಗ ದೊಡ್ಡ ಗೊಂದಲಗಳನ್ನು ಆಹ್ವಾನ ಮಾಡಿಕೊಂಡಂತೆ ತೋರುತ್ತಿದೆ. ಪಕ್ಷದಲ್ಲಿ ಈಗ ದಿನಕ್ಕೊಂದು ಬಣ ಹುಟ್ಟಿಕೊಳ್ಳುತ್ತಿದೆ. ಹಲವರು ಪಕ್ಷದಲ್ಲಿನ ಗೊಂದಲಗಳಿಂದ ಬೇಸರವಾಗಿ ಸೈಲೆಂಟ್ ಆಗಿದ್ದರೆ, ಇನ್ನೂ ಹಲವರು ಅನ್ಯ ಪಕ್ಷಗಳ ಸ್ನೇಹ ಬಯಸುತ್ತಿದ್ದಾರೆ ಎಂಬುವುದು ಪಕ್ಷದಲ್ಲಿನ ಆಂತರಿಕ ಗುಸುಗುಸು ಆಗಿದೆ.
ಈ ಮಧ್ಯೆಯೇ ಪಕ್ಷದ ಪ್ರಧಾನ ಕಾರ್ಯದರ್ಶಿಯೊಬ್ಬರು ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ ಎಂಬ ಚರ್ಚೆಗಳು ಕೂಡ ಶುರುವಾಗಿವೆ. ಜೆಡಿಎಸ್ ನೊಂದಿಗೆ ಬಿಜೆಪಿ ಸಖ್ಯವನ್ನು ಬಹಿರಂಗವಾಗಿಯೇ ವಿರೋಧಿಸುತ್ತ ಬಂದಿದ್ದ ಪ್ರಧಾನ ಕಾರ್ಯದರ್ಶಿ ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸಿದ್ದಾರೆ. ತಮ್ಮ ರಾಜಕೀಯ ಭವಿಷ್ಯ ಮಂಕಾಗಬಾರದು ಎಂಬ ಕಾರಣಕ್ಕೆ ಈ ರೀತಿ ನಿರ್ಧಾರ ಕೈಗೊಂಡಿದ್ದಾರೆ ಎಂಬುವುದು ಪಕ್ಷದಲ್ಲಿನ ಚರ್ಚೆಯಾಗುತ್ತಿದೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್- ವಿಜಯೇಂದ್ರ ಬಣಗಳ ಕಿತ್ತಾಟ, ಮತ್ತೊಂದೆಡೆ ಶ್ರೀರಾಮುಲು ಮತ್ತು ಜನಾರ್ಧನ ರೆಡ್ಡಿ ವಾಕ್ಸಮರ ಮಧ್ಯೆ ಪ್ರಮುಖ ನಾಯರೊಬ್ಬರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಅದನ್ನು ತಡೆಯುವ ಪ್ರಯತ್ನಕ್ಕೆ ವರಿಷ್ಠರು ಮಧ್ಯ ಪ್ರವೇಶಿಸದೇ ಇರುವುದು ಪಕ್ಷದ ಘಟಾನುಘಟಿ ನಾಯಕರಿಗೆ ಅಚ್ಚರಿ ಮೂಡಿಸಿದೆ. ಅಲ್ಲದೇ, ಬಿ.ವೈ. ವಿಜಯೇಂದ್ರ ಮತ್ತು ಯಡಿಯೂರಪ್ಪ ಕಂಡರೆ ಆಗದ ನಾಯಕರು ಮತ್ತು ಕಳೆದ ಚುನಾವಣೆಗಳಲ್ಲಿ ಟಿಕೆಟ್ ಸಿಗದೆ ಅಸಮಾಧಾನಗೊಂಡವರನ್ನು ಪದೇ ಪದೇ ಎತ್ತಿಕಟ್ಟುವ ಕೆಲಸವನ್ನು ಮತ್ತೊಂದು ಬಣ ಮಾಡುತ್ತಿದೆ ಎನ್ನಲಾಗುತ್ತಿದೆ. ಆ ರೀತಿ ಯತ್ನಿಸುತ್ತಿರುವವರು ಯಾರು? ಅವರ ಉದ್ಧೇಶವೇನು? ಅವರ ಉದ್ಧೇಶ ಪಕ್ಷವನ್ನನು ಮತ್ತಷ್ಟು ದುರ್ಬಲಗೊಳಿಸುವುದು ಆಗಿದೆಯೇ ಎಂಬೆಲ್ಲ ಕುರಿತು ಈಗ ಬಿಜೆಪಿಯಲ್ಲಿ ಚರ್ಚೆ ನಡೆಯುತ್ತಿದೆ.
ಪರಸ್ಪರ ಎತ್ತಿ ಕಟ್ಟುವ ಕಾರ್ಯದ ಹಿಂದಿರುವ ವ್ಯಕ್ತಿಗಳ ಮೇಲೆ ಕಣ್ಣಿಡುವ ಕೆಲಸ ಸದ್ದು ಗದ್ದಲವಿಲ್ಲದೇ ಪಕ್ಷದ ವರಿಷ್ಠರು ಆರಂಭಿಸಿದ್ದಾರೆ. ಈ ವ್ಯಕ್ತಿಗಳು ತಟಸ್ಥ ಎಂಬ ಬಣವನ್ನೂ ಹುಟ್ಟು ಹಾಕಿ ಅಲ್ಲಿನ ನಾಯಕರ ತಲೆ ಕೆಡಿಸಿ, ಪಕ್ಷದ ಚಟುವಟಿಕೆಗಳಿಂದ ವಿಮುಖರಾಗುವಂತೆ ಮಾಡುವುದರಲ್ಲೂ ಚಿತಾವಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಈಗಾಗಲೇ ಬಿಜೆಪಿ ವರಿಷ್ಠರಿಗೆ ತಲುಪಿದೆ ಎನ್ನಲಾಗುತ್ತಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಆಪ್ತರಾಗಿರುವ ನಾಯರೊಬ್ಬರು ಪಕ್ಷವನ್ನು ದುರ್ಬಲಗೊಳಿಸಲು ಯತ್ನಿಸುತ್ತಿರುವ ಇಂತಹ ವ್ಯಕ್ತಿಗಳ ಬ್ಗಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.