ಅಹ್ಮದಾಬಾದ್: ಭಾರತದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಭಾನುವಾರ ಬ್ರಿಟನ್ ರಾಕ್ ಬ್ಯಾಂಡ್ ಕೋಲ್ಡ್‌ಪ್ಲೇಯ ಸಂಗೀತ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗಾಯಕ ಕ್ರಿಸ್ ಮಾರ್ಟಿನ್ ಬುಮ್ರಾಗಾಗಿ ವಿಶೇಷ ಹಾಡೊಂದನ್ನು ರಚಿಸಿ ಅರ್ಪಿಸಿದರು.
ಕೋಲ್ಡ್‌ಪ್ಲೇ ತಂಡದ ಭಾರತ ಸಂಗೀತ ಸರಣಿಯ ಅಂತಿಮ ಕಾರ್ಯಕ್ರಮ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪ್ರಮುಖ ಗಾಯಕ ಕ್ರಿಸ್ ಮಾರ್ಟಿನ್ ಬುಮ್ರಾಗಾಗಿ ಹಾಡುಗಳನ್ನು ಹಾಡಿದರು.
“ಜಸ್ಪ್ರೀತ್, ಓಹ್ ಜಸ್ಪ್ರೀತ್, ನನ್ನ ಸುಂದರ ಸಹೋದರ. ನೀನು ಇಡೀ ಕ್ರಿಕೆಟ್ ನ ಅತ್ಯುತ್ತಮ ಬೌಲರ್. ನೀನು ಇಂಗ್ಲೆಂಡ್ ತಂಡದ ವಿಕೆಟ್‌ಗಳನ್ನು ಉರುಳಿಸುವುದು ನನಗೆ ಇಷ್ಟವಲ್ಲ. ಜಸ್ಪ್ರೀತ್ ಬುಮ್ರಾ ಧನ್ಯವಾದಗಳು. ಲವ್ ಯೂ,ʼʼ ಎಂದು ಮಾರ್ಟಿನ್ ಹಾಡುತ್ತಾರೆ. ಇದಕ್ಕೆ ಪ್ರೇಕ್ಷಕರು ಕೂಡ ಅತ್ಯುತ್ಸಾಹದಿಂದ ಪ್ರತಿಕ್ರಿಯಿಸುತ್ತಾರೆ.
ಕ್ರೀಡಾಂಗಣದ ದೊಡ್ಡ ಪರದೆಯಲ್ಲಿ ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬುಮ್ರಾ ಅವರ ಕೆಲವು ವಿಕೆಟ್‌ಗಳ ಸರಣಿಯನ್ನು ಪ್ರದರ್ಶಿಸಲಾಯಿತು. ಈ ಸರಣಿಯಲ್ಲಿ ಬುಮ್ರಾ ಎಂಟು ಇನ್ನಿಂಗ್ಸ್‌ಗಳಲ್ಲಿ 16.89 ಸರಾಸರಿಯಲ್ಲಿ 19 ವಿಕೆಟ್ ಪಡೆದಿದ್ದರು.
ಸದ್ಯ ಇಂಗ್ಲೆಂಡ್ ತಂಡ ಭಾರತ ಪ್ರವಾಸದಲ್ಲಿದ್ದು, 8 ಪಂದ್ಯಗಳನ್ನಾಡಲಿದೆ. 5 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನಾಡಲಿದೆ. ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ಪ್ರವಾಸದ ಅಂತಿಮ ದಿನದಂದು ಬೆನ್ನುನೋವಿಗೆ ಒಳಗಾದ ಬುಮ್ರಾ, ಅವರ ಫಿಟ್ನೆಸ್‌ಗೆ ಒಳಪಟ್ಟು ಇಂಗ್ಲೆಂಡ್ ವಿರುದ್ಧದ ಭಾರತದ ಕೊನೆಯ ಏಕದಿನ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಕೋಲ್ಕತಾ ಮತ್ತು ಚೆನ್ನೈನಲ್ಲಿ ನಡೆದ ಪಂದ್ಯಗಳನ್ನು ಗೆಲ್ಲುವ ಮೂಲಕ ಆತಿಥೇಯರು ಈಗಾಗಲೇ ಇಂಗ್ಲೆಂಡ್ ವಿರುದ್ಧ 2-0 ಮುನ್ನಡೆ ಸಾಧಿಸಿದ್ದಾರೆ.