ಪ್ರಯಾಗ್‌ರಾಜ್: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ(Maha Kumbh Mela) ಎಲ್ಲರನ್ನೂ ಆಕರ್ಷಿಸುತ್ತಿದೆ. ಅಲ್ಲಿ ನಡೆಯುತ್ತಿರುವ ಧಾರ್ಮಿಕ ವಿಧಿಗಳು ಹಾಗೂ ಪುಣ್ಯ ಸ್ನಾನದ ಬಗ್ಗೆ ಅಪಾರ ಗೌರವ ಮೂಡಿ ಬರುತ್ತಿದೆ. ದೊಡ್ಡವರು ಚಿಕ್ಕವರೆನ್ನದರೆ, ಬಡವರು- ಶ್ರೀಮಂತರೆನ್ನದೆ ಎಲ್ಲರೂ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಅದೇ ರೀತಿ ಭಾರತದ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್(Mary Kom) ಭೇಟಿ ನೀಡಿ ಪುಣ್ಯ ಸ್ನಾನ ಮಾಡಿದ್ದಾರೆ. ಕ್ರಿಕೆಟಿಗ ಸುರೇಶ್ ರೈನಾ(Suresh Raina) ಭೇಟಿ ನೀಡಿ ಪವಿತ್ರ ಕುಂಭ ಸ್ನಾನ ಮಾಡಿದ್ದಾರೆ. ಅವರಿಬ್ಬರೂ ಧನ್ಯತಾ ಭಾವ ಪಡೆದ ಚಿತ್ರಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಕಟಿಸಿದ್ದಾರೆ.
‘ಮಹಾಕುಂಭ ಮೇಳದಲ್ಲಿ ಅವಿಸ್ಮರಣೀಯ ಅನುಭವವಾಯಿತು. ದೈವಿಕ ಶಕ್ತಿ ಮತ್ತು ಆಧ್ಯಾತ್ಮಿಕ ಶ್ರೇಷ್ಠತೆಯನ್ನು ಅನುಭವಿಸಿದೆ. ಕಾರ್ಯಕ್ರಮದ ಭಾಗವಾಗಿ ಪುನೀತನಾಗಿದ್ದೇನೆ ‘ ಎಂದು ಸುರೇಶ್ ರೈನಾ ಟ್ವೀಟ್ ಮಾಡಿದ್ದಾರೆ. ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗೌರವಿಸಿ ಮತ್ತು ಸ್ವತಃ ಅನುಭ ಪಡೆಯಲು ಬಯಸಿದ್ದರಿಂದ ಪ್ರಯಾಗ್‌ರಾಜ್‌ಗೆ ಬಂದಿದ್ದೇನೆ. ಕುಂಭ ಮೇಳದಲ್ಲಿ ಪಾಲ್ಗೊಂಡಿರುವುದಕ್ಕೆ ಬಹಳ ಖುಷಿಯಾಗಿದೆ ಎಂದು ಮೇರಿ ಕೋಮ್ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಓಟಗಾರ್ತಿ ಹಿಮಾ ದಾಸ್ ಕೂಡ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದರು. ಹಿಮಾ ಅವರು ನಿಷೇಧದಿಂದ ಮುಕ್ತಗೊಂಡು ಪ್ರಸ್ತುತ ತರಬೇತಿ ಪಡೆಯುತ್ತಿದ್ದಾರೆ. ಈ ವರ್ಷ ನಡೆಯುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ನಿರೀಕ್ಷೆಯಲ್ಲಿದ್ದಾರೆ. ಬೆಂಗಳೂರು ಮೂಲದ ಅಭಿಮಾನಿಯೊಬ್ಬರು ಆರ್‌ಸಿಬಿ ತಂಡಕ್ಕೆ ಒಳಿತಾಗಲಿ, ಈ ಬಾರಿ ತಂಡ ಕಪ್ ಗೆಲ್ಲುವಂತಾಗಲಿ ಎಂದು ಪ್ರಾರ್ಥಿಸಿ ಮಹಾ ಕುಂಭಮೇಳದಲ್ಲಿ ಆರ್‌ಸಿಬಿ ಜರ್ಸಿ ತೊಟ್ಟು 7 ಬಾರಿ ಪುಣ್ಯ ಸ್ನಾನ ಮಾಡಿದ್ದರು.
ಕೋಟ್ಯಂತರ ಭಕ್ತರು ಭಾಗಿ
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಈಗಾಗಲೇ ಕೋಟ್ಯಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ಎಂಬ ಮೂರು ನದಿಗಳ ಸಂಗಮವನ್ನು ತ್ರಿವೇಣಿ ಸಂಗಮ ಎಂದು ಕರೆಯಲಾಗುತ್ತದೆ. ಈ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಪಾಪಗಳೆಲ್ಲಾ ತೊಳೆದು ಹೋಗಿ ಮೋಕ್ಷ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ನೂರಾರು ವರ್ಷಗಳಿಂದ ಚಾಲ್ತಿಯಲ್ಲಿದೆ.