ಕಡಲು ತೀರದ ಜನರಿಗೆ ಈಗ ಕಡಲ್ಕೊರೆತದ ಭಯ ಶುರುವಾಗಿದೆ. ಹೀಗಾಗಿ ಜನರು ವಿಷ್ಣುವಿನ ಮೊರೆ ಹೋಗಿದ್ದಾರೆ. ಕಡಲ್ಕೊರೆತೆ ತಪ್ಪಿಸುವುದಕ್ಕಾಗಿ ಉಡುಪಿ, ದಕ್ಷಿಣ ಕನ್ನಡ, ಕೇರಳದ ಕಾಸರಗೋಡು, ಕಣ್ಣೂರು ಜಿಲ್ಲೆಗಳ ಸಮುದ್ರ ತೀರದಲ್ಲಿ 20 ಸಾವಿರ ಜನರಿಂದ ಏಕಕಾಲದಲ್ಲಿ ವಿಷ್ಣು ಸಹಸ್ರನಾಮ ಪಠಿಸಲಾಗಿದೆ. 72 ಸಾವಿರ ಅಕ್ಷರ ಇರುವ ಸಹಸ್ರನಾಮ ಪಠಣ ಕಡಲತೀರದ ಉದ್ದಗಲಕ್ಕೂ ಮೊಳಗಿದೆ.
ಭಾನುವಾರ ಒಂದೇ ಸಮಯಕ್ಕೆ 20 ಸಾವಿರ ಜನರು ಅರಬ್ಬೀ ಸಮುದ್ರದ 108 ಕಡೆ ಏಕಕಾಲಕ್ಕೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದ್ದಾರೆ. ಸಂಜೆ 4 ರಿಂದ 6ರ ವರೆಗೂ ವಿಷ್ಣು ಸಹಸ್ರನಾಮ ಪಾರಾಯಣ ಮಾಡಲಾಗಿದೆ.
ಇದಕ್ಕೂ ಮುನ್ನ ಸಮುದ್ರಕ್ಕೆ ಕ್ಷೀರ ಅರ್ಪಣೆ ಮಾಡಲಾಯಿತು. ನಂತರ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಸಮಿತಿ ನೇತೃತ್ವ ಪಾರಾಯಣ ಮಾಡಲಾಯಿತು. ಈ ಹಿಂದೆ ಕೂಡ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ನಡೆದಿತ್ತು.2005ರಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಆ ನಂತರ ಕಡಲಕೊರೆತ ಕಡಿಮೆಯಾಗಿತ್ತು. ಹೀಗಾಗಿ ಮತ್ತೊಮ್ಮೆ ಆಯೋಜಿಸಲಾಗಿದೆ ಎಂದು ಜನರು ಮಾತನಾಡುತ್ತಿದ್ದಾರೆ. ಬೈಂದೂರು ತಾಲೂಕಿನ ಮರವಂತೆಯಲ್ಲಿ ಸಾಮೂಹಿಕ ಪಠಣದಿಂದ ಕಡಲು ಕೊರೆತ ಕಡಿಮೆಯಾಗಿದೆ ಎಂದು ಜನ ನಂಬಿದ್ದಾರೆ.
ಮಲ್ಪೆ ಬೀಚ್, ಪಡುಕೆರೆ ಬೀಚ್ ಸೇರಿದಂತೆ ಉಡುಪಿ ಜಿಲ್ಲೆಯ 50 ಕಡೆ ಸಾವಿರಾರು ಜನರು ಸಹಸ್ರನಾಮ ಪಠಣ ಮಾಡಿದ್ದಾರೆ. ಎಲ್ಲಾ ಗುಂಪುಗಳು ಆರು ಬಾರಿ ವಿಷ್ಣು ಸಹಸ್ರನಾಮ ಪಠಿಸಿವೆ. ಮಹಿಳೆಯರು, ಪುರುಷರು ಸೇರಿದಂತೆ 20 ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು.