ಹುಬ್ಬಳ್ಳಿ: ಮೈಕ್ರೋ ಫೈನಾನ್ಸ್ (Microfinance)ಗಳಿಂದಾಗಿ ಜನರು ಹೈರಾಣಾಗುತ್ತಿದ್ದಾರೆ. ಹೀಗಾಗಿ ಸರ್ಕಾರದಿಂದಲೇ ಜನಸಾಮಾನ್ಯರಿಗೆ ಸಾಲ ಕೊಡುವಂತಾಗಲಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಹೇಳಿದ್ದಾರೆ.
ನಗರದಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಕಿರುಕುಳದಿಂದಾಗಿ ರಾಜ್ಯದಲ್ಲಿನ ಬಡ ಮತ್ತು ಮಧ್ಯಮ ವರ್ಗದ ಜನರು ತುರ್ತು ಸಂದರ್ಭದಲ್ಲಿ ಇದ್ದ ವಾತಾವರಣವಿದೆ. ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿ ಜನಸಾಮಾನ್ಯರಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ. ಇದರಿಂದಾಗಿ ಜನರು ಹೈರಾಣಾಗಿದ್ದಾರೆ.
ಈ ಕುರಿತು ಸಿಎಂ ಸಿದ್ದರಾಮಯ್ಯ (Siddaramaiah) ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದ್ದ ಕಾನೂನಿನಲ್ಲೇ ಕ್ರಮಕೈಗೊಳ್ಳಬಹುದಿತ್ತು. ಹೊಸ ಕಾನೂನು ತರುವ ಅವಶ್ಯಕತೆ ಇರಲಿಲ್ಲ. ಸಿಎಂ ಸುಮ್ಮನೇ ತೋರಿಕೆಗೆ ಸಭೆ ನಡೆಸಿದ್ದಾರೆ. ಈ ರೀತಿ ಭರವಸೆ ನೀಡುವುದು ಸರಿಯಲ್ಲ. ಈಗಾಗಲೇ ಇರುವಂತಹ ಕಾನೂನಿನಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದ್ದಾರೆ.
ಬಿಜೆಪಿಯ ಆಂತರಿಕ ಒಳಜಗಳ ವಿಚಾರವಾಗಿ ಮಾತನಾಡಿದ ಅವರು, ಪಕ್ಷದಲ್ಲಿ ಎಲ್ಲವೂ ಒಂದು ಹಂತಕ್ಕೆ ಬಂದಿದೆ. ವರಿಷ್ಠರು ಎಲ್ಲವನ್ನೂ ಸರಿಪಡಿಸಲಿದ್ದಾರೆ. ಪಕ್ಷ ಬಹುದೊಡ್ಡದಾಗಿ ಬೆಳದಾಗ ಆಂತರಿಕ ವೈಮನಸ್ಸು ತಲೆದೋರುವುದು ಸಹಜ. ನಿಧಾನವಾಗಿ ಎಲ್ಲವೂ ಸರಿಯಾಗುತ್ತದೆ ಎಂದಿದ್ದಾರೆ.