ಕನ್ನಡದಲ್ಲಿ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿರುವ ಹೆಸರಾಂತ ನಿರ್ದೇಶಕ ಡಾ. ಎಸ್. ನಾರಾಯಣ್ ನಿರ್ದೇಶನದ ಹಾಗೂ ದುನಿಯಾ ವಿಜಯ್, ಶ್ರೇಯಸ್ ಕೆ. ಮಂಜು ಅಭಿನಯಿಸಿರುವ ಚಿತ್ರ “ಮಾರುತ” ಸದ್ದಿಲ್ಲದೆ ಚಿತ್ರೀಕರಣ ಮುಗಿಸಿಕೊಂಡಿದೆ.
ನಿರ್ಮಾಪಕ ಕೆ.ಮಂಜು ಹಾಗೂ ರಮೇಶ್ ಯಾದವ್ ಅವರು ಈಶಾ ಪ್ರೊಡಕ್ಷನ್ಸ್ ಮೂಲಕ ಜಂಟಿಯಾಗಿ ನಿರ್ಮಿಸುತ್ತಿರುವ ಬಹು ನಿರೀಕ್ಷಿತ ಈ ಚಿತ್ರದ ಚಿತ್ರೀಕರಣ ಸಂಪೂರ್ಣ ಮುಕ್ತಾಯವಾಗಿದೆ. ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಧಾರವಾಡ, ಕೂಡಲ ಸಂಗಮ, ಸವದತ್ತಿ, ಬೆಳಗಾವಿ, ಗೋವಾ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಇತ್ತೀಚೆಗೆ ಬೆಂಗಳೂರು ಸಮೀಪ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆಯಲಾಯಿತು.
ಎಸ್ ನಾರಾಯಣ್ ಹಾಗೂ ದುನಿಯಾ ವಿಜಯ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಮೂರನೇ ಚಿತ್ರ “ಮಾರುತ” ಆಗಿದೆ. ಈ ಹಿಂದೆ “ಚಂಡ” ಹಾಗೂ “ದಕ್ಷ” ಚಿತ್ರಗಳು ಇವರಿಬ್ಬರ ಕಾಂಬಿನೇಶನ್ ನಲ್ಲಿ ಬಂದು ಜನಪ್ರಿಯವಾಗಿತ್ತು.
ನಿರ್ಮಾಪಕ ಕೆ.ಮಂಜು ಅವರು ದುನಿಯಾ ವಿಜಯ್ ಅವರ ನಟನೆಯ “ರಜನಿಕಾಂತ”, “ಶಂಕರ ಐ.ಪಿ.ಎಸ್” ಚಿತ್ರಗಳನ್ನು ನಿರ್ಮಿಸಿದ್ದರು. ನಿರ್ಮಾಪಕ ರಮೇಶ್ ಯಾದವ್ ಅವರಿಗೆ ದುನಿಯಾ ವಿಜಯ್ ಅವರ ಜೊತೆಗೆ ಇದು ಮೊದಲ ಚಿತ್ರವಾಗಿದೆ. “ಮಾರುತ” ಒಂದು ಕಂಟೆಂಟ್ ಓರಿಯಂಟೆಡ್ ಚಿತ್ರ. ಇದು ನಿಮ್ಮ ಕಥೆ. ನಮ್ಮ, ನಿಮ್ಮೆಲ್ಲರ ಮನೆಯ ಕಥೆಯೂ ಹೌದು. ನಮಗೆ ಗೊತ್ತಿಲ್ಲದ ಹಾಗೆ ನಮ್ಮನ್ನೆಲ್ಲಾ ಅವರಿಸಿಕೊಂಡಿರುವ ಭೂತ. ಅದರಿಂದ ಸಮಾಜದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳೇನು? ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ ಎಂದು ಚಿತ್ರದ ಕಥಾಹಂದರದ ಬಗ್ಗೆ ನಿರ್ದೇಶಕರು ತಿಳಿಸಿದ್ದಾರೆ.
ದುನಿಯಾ ವಿಜಯ್, ಶ್ರೇಯಸ್ ಕೆ. ಮಂಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ ನಾಯಕಿ ಬೃಂದಾ. ವಿಭಿನ್ನ ಪಾತ್ರದಲ್ಲಿ ಸಾಧುಕೋಕಿಲ ಕಾಣಿಸಿಕೊಂಡಿದ್ದಾರೆ. ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ , ಚಿತ್ರಾ ಶೆಣೈ ಸೇರಿದಂತೆ ಅನೇಕ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಇರುವ “ಮಾರುತ” ಚಿತ್ರದ ವಿಶೇಷಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿದ್ದಾರೆ.
ಎಸ್. ನಾರಾಯಣ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ವಿನೋದ್ ಹಾಗೂ ಅರ್ಜುನ್ ಸಾಹಸ ನಿರ್ದೇಶನ ಮತ್ತು ಮೋಹನ್ ಕುಮಾರ್, ಸಂತು ಅವರ ನೃತ್ಯ ನಿರ್ದೇಶನವಿದೆ.