ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮುಖ್ಯ ಅತಿಥಿಯಾದ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೋ ಸುಬಿಯಾಂತೋ ಅವರಿಗೆಂದು ಶನಿವಾರ ರಾತ್ರಿ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಲಾಗಿದ್ದ ಔತಣಕೂಟವು ಒಂದು ಹಂತದಲ್ಲಿ ಬಾಲಿವುಡ್ ನೈಟ್ ಆಗಿ ಬದಲಾಯಿತು. ಇಂಡೋನೇಷ್ಯಾದ ನಿಯೋಗವು ಬಾಲಿವುಡ್‌ನ ರೊಮ್ಯಾಂಟಿಕ್ ಹಿಟ್ ‘ಕುಛ್ ಕುಛ್ ಹೋತಾ ಹೈ’ಯನ್ನು ಹಾಡುವ ಮೂಲಕ ನೆರೆದಿದ್ದ ಅತಿಥಿಗಳನ್ನು ಅಚ್ಚರಿಗೆ ಹಾಗೂ ಸಂತೋಷಕ್ಕೆ ನೂಕಿದ್ದು ಕಂಡುಬಂತು.
ಉಭಯ ದೇಶಗಳ ಬಾಂಧವ್ಯ ವೃದ್ಧಿಯ ನಿಟ್ಟಿನಲ್ಲಿ ಈ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾದ ಅಧ್ಯಕ್ಷರಿಗೆ ಆಹ್ವಾನ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಅಲ್ಲಿನ ನಿಯೋಗವು ಬಾಲಿವುಡ್‌ನ ಕುಛ್ ಕುಛ್ ಹೋತಾ ಹೈ ಹಾಡನ್ನು ಹಾಡುವ ಮೂಲಕ ಸಂಗೀತಕ್ಕೆ ಗಡಿಗಳಿಲ್ಲ ಎಂಬುದನ್ನು ನಿರೂಪಿಸಿದೆ. ನಗು ನಗುತ್ತಾ, ತಲೆಯಾಡಿಸುತ್ತಾ, ಸಣ್ಣಮಟ್ಟಿಗೆ ಕುಣಿಯುತ್ತಾ ಈ ಹಾಡನ್ನು ಹಾಡುತ್ತಿದ್ದಂತೆ, ನೆರೆದಿದ್ದ ಎಲ್ಲ ಅತಿಥಿಗಳೂ ಚಪ್ಪಾಳೆಯ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಾರುಖ್ ಖಾನ್, ಕಾಜೋಲ್ ಹಾಗೂ ರಾಣಿ ಮುಖರ್ಜಿ ಅಭಿನಯದ ‘ಕುಛ್ ಕುಛ್ ಹೋತಾ ಹೈ’ 1998ರ ದಶಕದಲ್ಲಿ ತೆರೆ ಕಂಡ ಸಿನಿಮಾ. ಇದು ಭಾರತ ಮಾತ್ರವಲ್ಲದೇ ಹಲವು ದೇಶಗಳಲ್ಲಿ ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮಿದೆ. ಕರಣ್ ಜೋಹರ್ ನಿರ್ದೇಶನದ ಈ ಸಿನಿಮಾ, ಬಾಲಿವುಡ್ ಕ್ಲಾಸಿಕ್ ಎಂಬ ಖ್ಯಾತಿಗೂ ಪಾತ್ರವಾಗಿದೆ. ಈಗ ಈ ಸಿನಿಮಾದ ಹಾಡನ್ನು ಹಾಡುವ ಮೂಲಕ ಇಂಡೋನೇಷ್ಯಾದ ನಿಯೋಗವು ಸಾಂಸ್ಕೃತಿಕ ಆಕರ್ಷಣೆ ಕೂಡ ಹೇಗೆ ರಾಜತಾಂತ್ರಿಕತೆಯಲ್ಲಿ ಸಕಾರಾತ್ಮಕ ಪಾತ್ರ ವಹಿಸುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ.