ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಬಂಗಲೆಗೆ ನುಗ್ಗಿ ಚಾಕು ಇರಿದ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಘಟನೆ ನಡೆದ ದಿನ ಸೈಫ್ ನಿವಾಸದಿಂದ ಸಂಗ್ರಹಿಸಲಾದ 19 ಸೆಟ್ ಬೆರಳಚ್ಚು(ಫಿಂಗರ್‌ಪ್ರಿಂಟ್)ಗಳಲ್ಲಿ ಯಾವುದೂ ಆರೋಪಿ ಶರೀಫುಲ್ ಇಸ್ಲಾಂನ ಬೆರಳಚ್ಚಿಗೆ ಹೋಲಿಕೆಯಾಗುತ್ತಿಲ್ಲ ಎಂಬ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ.
ಮುಂಬೈ ಪೊಲೀಸರು ಸೈಫ್ ಮನೆಯಿಂದ ಸಂಗ್ರಹಿಸಿದ್ದ ಬೆರಳಚ್ಚು ಮಾದರಿಗಳನ್ನು ರಾಜ್ಯ ಅಪರಾಧ ತನಿಖಾ ವಿಭಾಗ(ಸಿಐಡಿ)ದ ಬೆಳರಚ್ಚು ಬ್ಯೂರೋಗೆ ಕಳುಹಿಸಿಕೊಟ್ಟಿದ್ದರು. ಈ ಬೆರಳಚ್ಚುಗಳ ಕಂಪ್ಯೂಟರ್ ಆಧರಿತ ವರದಿಯ ಪ್ರಕಾರ, ಇವ್ಯಾವುವೂ ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ, ಆರೋಪಿ ಶರೀಫುಲ್ ಇಸ್ಲಾಂನ ಬೆರಳಚ್ಚುಗಳಿಗೆ ಮ್ಯಾಚ್ ಆಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಬೆರಳಚ್ಚು ಪರೀಕ್ಷೆಯ ಫಲಿತಾಂಶ ನೆಗೆಟಿವ್ ಬಂದಿರುವುದಾಗಿ ಮುಂಬೈ ಪೊಲೀಸರಿಗೆ ಸಿಐಡಿ ಮಾಹಿತಿ ರವಾನಿಸಿದೆ ಎಂದೂ ಮೂಲಗಳು ಹೇಳಿವೆ. ಈಗ ಪೊಲೀಸರು ಇನ್ನಷ್ಟು ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
ಆರೋಪಿ ಶರೀಫುಲ್ ಇಸ್ಲಾಂ ಅಕ್ರಮವಾಗಿ ಭಾರತ ಪ್ರವೇಶಿಸಿರುವ ಬಾಂಗ್ಲಾ ಪ್ರಜೆ. ವ್ಯಕ್ತಿಯೊಬ್ಬ ಹಣ ಕೊಟ್ಟರೆ ತನಗೆ ಭಾರತದ ನಕಲಿ ಪೌರತ್ವ ದಾಖಲೆಗಳನ್ನು ಒದಗಿಸುವುದಾಗಿ ಹೇಳಿದ್ದ. ಹಾಗಾಗಿ ನಾನು ಭಾರತದಲ್ಲೇ ಉಳಿದುಕೊಂಡಿದ್ದೆ. ಆದರೆ, ಸೈಫ್ ಮನೆಯಲ್ಲಿ ದರೋಡೆಗೆ ನಾನು ಯತ್ನಿಸಿಲ್ಲ.
ನನ್ನನ್ನು ಈ ಪ್ರಕರಣದಲ್ಲಿ ಬಲಿಪಶು ಮಾಡಲಾಗುತ್ತಿದೆ ಎಂದು ಆರೋಪಿ ಶರೀಫುಲ್ ಹೇಳಿದ್ದ. ಬಾಂಗ್ಲಾದೇಶದಲ್ಲಿರುವ ಆತನ ತಂದೆಯೂ ಪುತ್ರನ ಬಂಧನ ಕುರಿತು ಪ್ರತಿಕ್ರಿಯಿಸಿದ್ದು, ಸೈಫ್ ಮನೆಯ 6ನೇ ಮಹಡಿಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿಯ ಮುಖ ಸೆರೆಯಾಗಿದೆ. ಆದರೆ ಆತನ ಮುಖ ಚಹರೆಗೂ ನನ್ನ ಮಗನ ಮುಖ ಚಹರೆಗೂ ಸಾಮ್ಯತೆ ಇಲ್ಲ.
ನನ್ನ ಮಗ ದರೋಡೆಕೋರನಲ್ಲ ಎಂದು ಇತ್ತೀಚೆಗೆ ಹೇಳಿಕೆ ಕೊಟ್ಟಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣುವ ಆರೋಪಿಗೂ, ಬಂಧಿತ ಆರೋಪಿಗೂ ಸಾಮ್ಯತೆಗಳಿಲ್ಲ ಎಂದು ಭಾರೀ ಚರ್ಚೆಯಾಗಿತ್ತು. ಇವೆಲ್ಲದರ ನಡುವೆಯೇ ಇಂಥದ್ದೊಂದು ಬೆಳವಣಿಗೆ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.