ಚೆನ್ನೈ: ಪ್ರವಾಸಿ ಇಂಗ್ಲೆಂಡ್(India vs England) ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಅಜೇಯ 72 ರನ್ ಬಾರಿಸಿದ ತಿಲಕ್ ವರ್ಮಾ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ. ಈ ಇನಿಂಗ್ಸ್ ಅವರ ಪಾಲಿಗೆ ಸ್ಮರಣೀಯವೂ ಆಗಿದೆ. ಯಾಕೆಂದರೆ ಅವರು ವಿಶ್ವ ಕ್ರಿಕೆಟ್‌ನಲ್ಲಿ ಅಮೋಘ ಸಾಧನೆಯೊಂದನ್ನು ಮಾಡಿದ್ದಾರೆ.
ಈ ಗೆಲುವಿನ ನಡುವೆ ತಿಲಕ್ ಟಿ20 ಕ್ರಿಕೆಟ್‌ನಲ್ಲಿ ಔಟಾಗದೆ ಉಳಿದು ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆದಿದ್ದಾರೆ. ತಿಲಕ್ ವರ್ಮಾ ಆಡಿರುವ ಈ ಹಿಂದಿನ ಮೂರು ಟಿ20 ಪಂದ್ಯಗಳಲ್ಲಿ ಅಜೇಯ ಇನಿಂಗ್ಸ್ ಆಡಿದ್ದರು. 19, 120 ಮತ್ತು 107 ರನ್ ಗಳಿಸಿದ್ದರು. ಇದೀಗ ತಮ್ಮ ನಾಲ್ಕನೇ ಇನಿಂಗ್ಸ್‌ನಲ್ಲಿಯೂ ಅಜೇಯ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅಜೇಯವಾಗಿ ಉಳಿದು ಗಳಿಸಿದ ಒಟ್ಟು ರನ್‌ಗಳು ಅವರ ಸಾಧನೆಯಾಗಿದೆ.
ಅಜೇಯವಾಗಿ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಮಾರ್ಕ್ ಚಾಪ್‌ಮನ್(271 ರನ್) ಇದ್ದರು. ಅವರನ್ನು ತಿಲಕ್ ಹಿಂದಿಕ್ಕಿ 318 ರನ್ ಬಾರಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ (240) ಮತ್ತು ನಾಲ್ಕನೇ ಸ್ಥಾನದಲ್ಲಿ ಆರೋನ್ ಫಿಂಚ್ (240) ಇದ್ದಾರೆ.
ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಭಾರತ ತಂಡದ ಪರ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಧ್ರುವ್ ಜುರೆಲ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ವಾಷಿಂಗ್ಟನ್ ಸುಂದರ್ 26 ರನ್‌ಗಳ ನಿರ್ಣಾಯಕ ಕೊಡುಗೆ ನೀಡಿ ವಿಕೆಟ್ ಒಪ್ಪಿಸಿದರು. ಆದರೆ, 3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಕೊನೆಯವರೆಗೂ ಬ್ಯಾಟ್ ಮಾಡಿದ ತಿಲಕ್ ವರ್ಮಾ, ಅತ್ಯಂತ ಜವಾಬ್ದಾರಿಯುತವಾಗಿ ಆಟವಾಡಿದರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 166 ರನ್ ಬಾರಿಸಿದರೆ, ಭಾರತ 19.2 ಓವರ್‌ಗಳಲ್ಲಿ 167 ರನ್ ಗಳಿಸಿ ಗೆಲುವು ದಾಖಲಿಸಿತು. ಇಂಗ್ಲೆಂಡ್ ಪರ ಬಿರುಸಿನ ಬ್ಯಾಟಿಂಗ್ ನಡೆಸಿದ ಬಟ್ಲರ್ 3 ಸಿಕ್ಸರ್ ಮತ್ತು 2 ಬೌಂಡರಿ ನೆರವಿನಿಂದ 45 ರನ್ ಬಾರಿಸಿದರು. ಇದೇ ವೇಳೆ ಭಾರತ ವಿರುದ್ಧ ಟಿ20ಯಲ್ಲಿ ಅತ್ಯಧಿಕ ರನ್ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್(592) ಹೆಸರಿನಲ್ಲಿತ್ತು. ಇದೀಗ ಬಟ್ಲರ್(611) ರನ್ ಬಾರಿಸಿದ್ದಾರೆ.