ಬೆಂಗಳೂರು: ಮಾರಣಾಂತಿಕ ಹಲ್ಲೆ ಹಾಗೂ ಶಸ್ತ್ರಾಸ್ತ್ರ ಬಳಕೆ ಮಾಡಿರುವ ಆರೋಪದಲ್ಲಿ ಲಾಯರ್ ಜಗದೀಶ್ ಅರೆಸ್ಟ್ ಆಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಸೂಚಿಸಿದೆ.
ಲಾಯರ್ ಜಗದೀಶ್ ಹಾಗೂ ಅವರ ಪುತ್ರ ಸೇರಿದಂತೆ ನಾಲ್ವರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಆರೋಪಿಗಳಾದ ಜಗದೀಶ್, ಪುತ್ರ ಆರ್ಯ ಜಗದೀಶ್, ಅವರ ಗನ್‌ಮ್ಯಾನ್ ಅಭಿಷೇಕ್ ತಿವಾರಿ, ಕಾರು ಚಾಲಕ ಶುಭರಾಮ್ ಕುಮಾರ್ ಬಂಧಿತರು. ಈಗ ನ್ಯಾಯಾಲಯವರು ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಜಗದೀಶ್ ಕಾರು ಧ್ವಂಸ
ವಿರೂಪಾಕ್ಷಪುರ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಸ್ಥಳೀಯರು ಹಾಗೂ ಜಗದೀಶ್ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಅದು ವಿಕೋಪಕ್ಕೆ ತೆರಳಿ ಜಗದೀಶ್ ಅವರ ಗನ್‌ಮ್ಯಾನ್ ಪಿಸ್ತೂಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಹೀಗಾಗಿ ಅಲ್ಲಿದ್ದವರು ಆಕ್ರೋಶಗೊಂಡು ಲಾಯರ್ ಕಾರು ಧ್ವಂಸಗೊಳಿಸಿದ್ದರು. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದರು.
ದೂರು- ಪ್ರತಿ ದೂರು
ಸ್ಥಳೀಯರು ದಾಖಲಿಸಿರುವ ದೂರಿನ ಹಿನ್ನೆಲೆಯಲ್ಲಿ ಲಾಯರ್ ಜಗದೀಶ್ ಹಾಗೂ ಆರೋಪಿಗಳನ್ನು ಬಂಧಿಸಲಾಗಿತ್ತು. ದೂರಿಗೆ ಪ್ರತಿಯಾಗಿ ಲಾಯರ್ ಜಗದೀಶ್ ಕೂಡ ಪ್ರತಿ ದೂರು ನೀಡಿದ್ದಾರೆ.