ಬೆಂಗಳೂರು : ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಶಾಸಕರಿಗೆ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ ಕ್ಲಾಸ್ ತೆಗೆದುಕೊಂಡಿರುವುದು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಶ್ರೀರಾಮುಲು ಸುದ್ದಿ ದೊಡ್ಡ ವಿವಾದಕ್ಕೆ ಕಾರಣವಾಯಿತು. ಅಗರ್ವಾಲ್ – ಸಿ ಟಿ ರವಿ ನಡುವಿನ ಮಾತಿನ ಚಕಮಕಿ ಕೂಡ ರಿವೀಲ್ ಆಯಿತು. ಈಗ ವಿಜೇಯಂದ್ರ ಸುದ್ದಿ ಹೊರ ಬಿದ್ದಿದೆ.
ರಾಜ್ಯ ಉಸ್ತುವಾರಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ದ ಧ್ವನಿ ಎತ್ತಿದ್ದು ಬರೀ ಇಬ್ಬರು ಶಾಸಕರು ಎಂಬ ಮಾಹಿತಿ ಲಭ್ಯವಾಗಿದೆ. ಸಭೆಯಲ್ಲಿ ಸುಮಾರು 60 ಶಾಸಕರು ಭಾಗವಹಿಸಿದ್ದರು, ಆ ಪೈಕಿ ಇಬ್ಬರು ಮಾತ್ರ ರಾಜ್ಯಾಧ್ಯಕ್ಷರ ವಿರುದ್ಧ ಅಪಸ್ವರ ಎತ್ತಿದ್ದಾರೆ ಎನ್ನಲಾಗಿದೆ.
ಅಲ್ಲದೇ, ಮೂವರು ವಿಜಯೇಂದ್ರ ವಿರುದ್ದ ಮಾತನಾಡಿದರೂ ಪಕ್ಷದ ಹಿತಕ್ಕಾಗಿ ಆದಷ್ಟು ಬೇಗ ಸೂಕ್ತ ನಿರ್ಧಾರ ತೆಗೆದುಕೊಳ್ಳಿ ಎಂಬ ಸಲಹೆ ನೀಡಿದ್ದಾರೆ. ಬಿಜೆಪಿ 66 ಶಾಸಕರನ್ನು ಹೊಂದಿದೆ. ಐದಾರೂ ಶಾಸಕರು, ಸಭೆಗೆ ಗೈರಾಗಿದ್ದರು. ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಇಬ್ಬರೂ ಪಕ್ಷದ ಚಟುವಟಿಕೆಗಳಿಂದ ಈಗಾಗಲೇ ದೂರವಿದ್ದಾರೆ. ರಮೇಶ್ ಜಾರಕಿಹೊಳಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಗೈರಾಗಿದ್ದರು.
ವಿಜಯೇಂದ್ರ ವಿರುದ್ದ ಉಸ್ತುವಾರಿ ಮುಂದೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿ ತಲೆದಂಡಕ್ಕೆ ಒತ್ತಾಯಿಸಿದ್ದು ಹರಿಹರ ಶಾಸಕ ಬಿ.ಪಿ.ಹರೀಶ್, ಹೊಳಲ್ಕರೆ ಶಾಸಕ ಎಂ.ಚಂದ್ರಪ್ಪ ಎನ್ನಲಾಗಿದೆ. ಸಭೆಯಲ್ಲಿ 56ಕ್ಕೂ ಹೆಚ್ಚು ಶಾಸಕರು ವಿಜಯೇಂದ್ರ ಪರವಾಗಿ ಮಾತನಾಡಿದ್ದಾರೆ.
ವಿಜಯೇಂದ್ರ ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸಲು ಸಮರ್ಥರಿದ್ದಾರೆ. ಉತ್ತರ ಕರ್ನಾಟಕ, ಬೆಂಗಳೂರು ಭಾಗದ ಕೆಲವು ಮುಖಂಡರು ಅಪಸ್ವರ ಎತ್ತಿದರೆ, ಅದಕ್ಕೆ ಬೆಲೆ ಕೊಡಬೇಕಾಗಿಲ್ಲ. ಅಂಥವರ ವಿರುದ್ದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೂಡ ಹಲವರು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಿ.ವೈ. ವಿಜಯೇಂದ್ರ ಮತ್ತೆ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವರೇ ಎಂಬ ಪ್ರಶ್ನೆ ಎದ್ದಿದೆ.