ಲಕ್ನೋ:
ಗಂಡಸರೇ ಹುಷಾರ್, ಇಂದೇ ಕುಡಿತದ ಚಟ ಬಿಟ್ಟುಬಿಡಿ, ಇಲ್ಲದಿದ್ದೆರ ಎಂತಹ ಅನಾಹುತಗಳಾಗುತ್ತವೆ ಎನ್ನುವುದಕ್ಕೆ ಈ ಸುದ್ದಿಯೇ ಉದಾಹರಣೆ. ಉತ್ತರಪ್ರದೇಶದ ಗೋರಖ್‌ಪುರದಲ್ಲಿ ಪತಿಯಂದಿರ ಕುಡಿತದ ಚಟದಿಂದ ರೋಸಿಹೋದ ಪತ್ನಿಯರು ಮನೆ ಬಿಟ್ಟು ಹೋಗಿ, ತಾವೇ ಪರಸ್ಪರ ವಿವಾಹವಾಗಿರುವ ಅಪರೂಪದ ಘಟನೆ ನಡೆದಿದೆ!
ದಿಯೋರಿಯಾದಲ್ಲಿ ಚೋಟಿ ಕಾಶಿ ಎಂದೇ ಖ್ಯಾತಿ ಪಡೆದಿರುವ ಶಿವ ದೇಗುಲದಲ್ಲಿ ಈ ಮಹಿಳೆಯರಿಬ್ಬರೂ ವಿವಾಹವಾಗಿದ್ದಾರೆ. ಇವರ ಹೆಸರು ಕವಿತಾ ಮತ್ತು ಗುಂಜಾ. ಇವರಿಬ್ಬರಿಗೂ 6 ವರ್ಷಗಳ ಹಿಂದೆ ಇನ್ ಸ್ಟಾಗ್ರಾಂನಲ್ಲಿ ಪರಸ್ಪರ ಪರಿಚಯವಾಗಿತ್ತು. ಇಬ್ಬರ ಪತಿಯರೂ ಕುಡಿತದ ದಾಸರಾಗಿದ್ದರು. ಇದರಿಂದ ತೀವ್ರ ನೊಂದಿದ್ದ ಇಬ್ಬರೂ ತಮ್ಮ ನೋವನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು. ತಮ್ಮ ಮೇಲಾಗುತ್ತಿರುವ ಕೌಟುಂಬಿಕ ದೌರ್ಜನ್ಯ, ಪತಿಯರು ನಡೆಸಿಕೊಳ್ಳುತ್ತಿರುವ ರೀತಿ, ಕಷ್ಟಕೋಟಲೆಗಳನ್ನು ಹೇಳಿಕೊಳ್ಳುತ್ತಾ ಇವರಿಬ್ಬರೂ ಸ್ನೇಹವು ಗಾಢವಾಗತೊಡಗಿತು. ಕಡೆಗೆ ಒಂದು ದಿನ, “ಇಂಥ ಕುಡಿತದ ಚಟ ಹತ್ತಿಸಿಕೊಂಡಿರುವ ಪತಿಯರ ಜತೆ ಬದುಕುವುದಕ್ಕಿಂತಲೂ ಎಲ್ಲ ಕಷ್ಟ-ಸುಖಗಳನ್ನು ಸಮಾನವಾಗಿ ಹಂಚಿಕೊಳ್ಳುತ್ತಾ, ಪರಸ್ಪರ ಭಾವನೆಗಳಿಗೆ ಸ್ಪಂದಿಸುತ್ತಿರುವ ನಾವೇ ಜೊತೆಯಾಗಿದ್ದರೆ ಚೆನ್ನಾಗಿರುತ್ತದಲ್ಲವೇ” ಎಂದು ಭಾವಿಸಿ, ಪರಸ್ಪರ ಮದುವೆಯಾಗುವ ನಿರ್ಧಾರಕ್ಕೆ ಬಂದರು. ಅದರಂತೆ, ಇಬ್ಬರೂ ಒಂದು ದಿನ ನಿಗದಿಪಡಿಸಿಕೊಂಡು ಮನೆಯನ್ನು ತೊರೆದು, ಗೋರಖ್‌ಪುರದ ಶಿವ ದೇಗುಲಕ್ಕೆ ಬಂದು ವಿವಾಹವಾಗಿದ್ದಾರೆ.

ಗುಂಜಾ ವರನಾಗಿಯೂ, ಕವಿತಾ ವಧುವಾಗಿಯೂ ವಿವಾಹ ಬಂಧಕ್ಕೆ ಒಳಗಾಗಿದ್ದಾರೆ. ಗುಂಜಾ ಅವರು ಕವಿತಾ ಹಣೆಗೆ ಸಿಂಧೂರ ಹಚ್ಚಿದ ಬಳಿಕ, ದೇಗುಲದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡಿದ್ದಾರೆ. ನಂತರ ಮಾತನಾಡಿರುವ ಗುಂಜಾ, “ನಮ್ಮ ಗಂಡಂದಿರ ಮದ್ಯಪಾನದ ಚಟ ಮತ್ತು ದೌರ್ಜನ್ಯದಿಂದ ನೊಂದು ನಾವು ಈ ನಿರ್ಧಾರ ಕೈಗೊಂಡೆವು. ನಮಗೆ ಶಾಂತಿ ಮತ್ತು ಪ್ರೀತಿಯ ಬದುಕು ಬೇಕು. ನಾವು ಗೋರಖ್‌ಪುರದಲ್ಲೇ ಸತಿ-ಪತಿಯಂತೆ ಬದುಕಲು ನಿರ್ಧರಿಸಿದ್ದೇವೆ. ಇಬ್ಬರೂ ದುಡಿದು ಹೇಗೋ ಜೀವನ ಸಾಗಿಸುತ್ತೇವೆ” ಎಂದಿದ್ದಾರೆ.